ಲಕ್ನೋದ 9 ಹೊಟೇಲ್‌ಗಳಿಗೆ ಬಾಂಬ್ ಭೀತಿ | ವಿಮಾನಗಳಿಗೂ ಮುಂದುವರಿದ ಬೆದರಿಕೆ

Update: 2024-10-27 14:07 GMT

ಸಾಂದರ್ಭಿಕ ಚಿತ್ರ | PC : PTI

ಲಕ್ನೋ : ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಮುಂದುವರಿದಿರುವಂತೆಯೇ, ಉತ್ತರಪ್ರದೇಶದ ಲಕ್ನೋ ನಗರದ 9 ಪ್ರತಿಷ್ಠಿತ ಹೋಟೆಲ್‌ಗಳಿಗೆ ರವಿವಾರ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, 50 ಲಕ್ಷ ರೂ.ಗಳ ಒತ್ತೆಹಣಕ್ಕಾಗಿ ಬೇಡಿಕೆಯೊಡ್ಡಲಾಗಿದೆ.

ರವಿವಾರ ಬೆಳಗ್ಗೆ 8:03ರ ವೇಳೆಗೆ ಬಂದ ಅನಾಮಿಕ ಇಮೇಲ್ ಸಂದೇಶವೊಂದು ನಗರದ ಹೋಟೇಲ್‌ಗಳಿಗೆ ಬಂದಿದ್ದು, ಹೋಟೆಲ್‌ಗಳ ಆವರಣಗಳಲ್ಲಿ , ಕಪ್ಪುಬ್ಯಾಗ್‌ಗಳಲ್ಲಿ ಸ್ಫೋಟಕ ಸಾಮಾಗ್ರಿಗಳನ್ನು ಇರಿಸಲಾಗಿದೆಯೆಂದು ತಿಳಿಸಲಾಗಿತ್ತು. ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವಂತಹ ಯಾವುದೇ ಪ್ರಯತ್ನಗಳನ್ನು ನಡೆಸಿದಲ್ಲಿ ಸಾಮೂಹಿಕವಾಗಿ ಸಾವುನೋವು ಸಂಭವಿಸಬಹುದೆಂದು ಇಮೇಲ್ ಕಳುಹಿಸಿದ ವ್ಯಕ್ತಿಯು ಎಚ್ಚರಿಕೆ ನೀಡಿದ್ದನು.

ಬೆದರಿಕೆ ಸಂದೇಶದ ಬಳಿಕ, ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಲಕ್ನೋ ಪೊಲೀಸರು ಸೈಬರ್ ಸೆಲ್ ಅನ್ನು ಸಂಪರ್ಕಿಸಿದ್ದಾರೆ. ಹೊಟೇಲ್‌ಗಳನ್ನು ಸಂಭಾವ್ಯ ಅಪಾಯದಿಂದ ಮುಕ್ತಗೊಳಿಸಲು ಬಾಂಬ್ ನಿಷ್ಕ್ರಿಯದಳ ಹಾಗೂ ಪತ್ತೆ ದಳಗಳು ಮತ್ತು ಶ್ವಾನದಳಗಳು ಶೋಧ ಕಾರ್ಯಾಚರಣೆ ನಡೆಸಿದವು. ಬಾಂಬ್ ಸ್ಫೋಟದ ಬೆದರಿಕೆಗೆ ಗುರಿಯಾದ ಹೊಟೇಲ್‌ಗಳು ಗಾಂಧಿನಗರ, ಹಝ್ರತ್‌ಗಂಜ್, ಸರೋಜಿನಿ ನಗರ ಹಾಗೂ ಆಲಂಬಾಘ್ ಸರಾಕಾದಂತಹ ಲಕ್ನೋದ ವಿಲಾಸಿ ಪ್ರದೇಶಗಳಲ್ಲಿವೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರ ಸೂಚನೆಯಂತೆ ಹೋಟೆಲ್‌ಗಳು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿವೆ. ಅಲ್ಲದೆ ಲಕ್ನೋ ನಗರಾದ್ಯಂತ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಮಧ್ಯೆ ಗೋರಖ್‌ಪುರ ಮಾರ್ಗವಾಗಿ ಬೆಂಗಳೂರಿನಿಂದ ದಿಲ್ಲಿಗೆ ಹಾಗೂ ಬೆಂಗಳೂರಿನಿಂದ ಆಯೋಧ್ಯೆಗೆ ತೆರಳುವ ವಿಮಾನಗಳಿಗೂ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಇದರ ಪರಿಣಾಮವಾಗಿ ವಿಮಾನನಿಲ್ದಾಣಗಳಲ್ಲಿ ಬಾಂಬ್ ಶೋಧದಳದ ತಂಡಗಳು ತಕ್ಷಣವೇ ಶೋಧ ಕಾರ್ಯಾಚರಣೆ ನಡೆಸಿದವು ಹಾಗೂ ವಿಮಾನನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಪೊಲೀಸರು ಹಾಗೂ ಸಿಐಎಸ್‌ಎಫ್ ಸಿಬ್ಬಂದಿ ಜಂಟಿಯಾಗಿ ವಿಮಾನನಿಲ್ದಾಣದಲ್ಲಿ ತಪಾಸಣಾ ಕಾರ್ಯವನ್ನು ನಡೆಸಿದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News