ಪ್ರಿಯತಮೆಯ ಪತಿ ಮತ್ತು ತಂದೆಯ ಕೊಲೆಗೆ ಕೊಟ್ಟ ಸುಪಾರಿ; ತಪ್ಪಾಗಿ ಇನ್ಯಾರನ್ನೋ ಕೊಲೆ ಮಾಡಿದ ಹಂತಕ!
ಲಕ್ನೋ: ಉತ್ತರಪ್ರದೇಶದ ಲಕ್ನೋದಲ್ಲಿ ವ್ಯಕ್ತಿಯೋರ್ವ ತನ್ನ ಪ್ರಿಯತಮೆಯ ಪತಿ ಮತ್ತು ತಂದೆಯನ್ನು ಕೊಲೆ ಮಾಡಲು ಕೊಲೆಗಾರರನ್ನು ನೇಮಿಸಿಕೊಂಡಿದ್ದ, ಆದರೆ, ಸುಪಾರಿ ಹಂತಕ ಇನ್ಯಾರನ್ನೋ ಕೊಲೆ ಮಾಡಿ ಜೈಲು ಸೇರಿದ್ದಾನೆ.
ಡಿ.30ರಂದು ಲಕ್ನೋದಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ರಿಝ್ವಾನ್ ಎಂಬಾತನ ಕೊಲೆ ನಡೆದಿತ್ತು. ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಕೊಲೆಯ ಹಿಂದೆ ಬೇರೆಯದ್ದೇ ಕಥೆ ಇರುವುದು ಬಯಲಾಗಿದೆ. ರಿಝ್ವಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅಫ್ತಾಬ್ ಅಹ್ಮದ್, ಯಾಸಿರ್ ಮತ್ತು ಕೃಷ್ಣಕಾಂತ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದು ದೇಶೀಯ ಬಂದೂಕು, 14 ಜೀವಂತ ಗುಂಡುಗಳು, ಮೂರು ಮೊಬೈಲ್ ಫೋನ್ ಗಳು ಮತ್ತು ಹತ್ಯೆಗೆ ಬಳಸಿದ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ಹೇಳಿದ್ದೇನು?:
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿ ರವೀನಾ ತ್ಯಾಗಿ ಪ್ರತಿಕ್ರಿಯಿಸಿದ್ದು, ಡಿಸೆಂಬರ್ 30ರಂದು ಲಕ್ನೋದ ಮದೇಹಗಂಜ್ ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಈ ಕುರಿತು ತನಿಖೆ ನಡೆಸಿದಾಗ ಮೃತನನ್ನು ಮೊಹಮ್ಮದ್ ರಿಝ್ವಾನ್ ಎಂದು ಗುರುತಿಸಲಾಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿ ಕೊಲೆಗೆ ಸಂಬಂಧಿಸಿ ಅಫ್ತಾಬ್ ಅಹ್ಮದ್, ಯಾಸಿರ್ ಮತ್ತು ಕೃಷ್ಣಕಾಂತ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.
ಬಂಧಿತ ಅಫ್ತಾಬ್ ಅಹ್ಮದ್ ಗೆ ಓರ್ವ ವಿವಾಹಿತ ಮಹಿಳೆಯ ಜೊತೆ ಅನೈತಿಕ ಸಂಬಂಧವಿತ್ತು. ಇದಕ್ಕೆ ಮಹಿಳೆಯ ಪತಿ ಮತ್ತು ತಂದೆ ಇರ್ಫಾನ್ ಅಡ್ಡಿಯಾಗಿದ್ದರು. ಇದರಿಂದಾಗಿ ಅಫ್ತಾಬ್ ಅಹ್ಮದ್, ಯಾಸಿರ್ ಎಂಬಾತನನ್ನು ಸಂಪರ್ಕಿಸಿ ಮಹಿಳೆಯ ಪತಿ ಮತ್ತು ತಂದೆ ಇರ್ಫಾನ್ ಅವರನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾನೆ. ಯಾಸಿರ್ ಈ ಸುಪಾರಿ ಕೃತ್ಯವನ್ನು ನಡೆಸಲು ತನ್ನ ಜೊತೆ ಕೃಷ್ಣಕಾಂತ್ ನನ್ನು ಸೇರಿಸಿಕೊಂಡಿದ್ದಾನೆ.
ಡಿಸೆಂಬರ್ 30ರ ರಾತ್ರಿ ಯಾಸಿರ್ ಮತ್ತು ಕೃಷ್ಣಕಾಂತ್ ಮಹಿಳೆಯ ತಂದೆ ಇರ್ಫಾನ್ ನನ್ನು ಕೊಲೆ ಮಾಡಲು ಮದೇಹಗಂಜ್ ಗೆ ತೆರಳಿದ್ದಾರೆ. ಆದರೆ, ಅಲ್ಲಿ ಅವರು ಇರ್ಫಾನ್ ಎಂದು ತಪ್ಪಾಗಿ ಗ್ರಹಿಸಿ ಕ್ಯಾಬ್ ಚಾಲಕನಾಗಿದ್ದ ಮೊಹಮ್ಮದ್ ರಿಝ್ವಾನ್ ನನ್ನು ಕೊಲೆ ಮಾಡಿರುವುದು ತನಿಖೆಯ ವೇಳೆ ಬಯಲಾಗಿದೆ.