ಖರಗ್ ಪುರ್ ಐಐಟಿ ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕೋಲ್ಕತ್ತಾ: ಖರಗ್ ಪುರ್ ಐಐಟಿಯ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿ ನಿಲಯದ ಕೋಣೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಸೋಮವಾರ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಶಾವೋನ್ ಮಲಿಕ್ ಎಂದು ಗುರುತಿಸಲಾಗಿದ್ದು, ಆತ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ರವಿವಾರ ತಮ್ಮ ಪುತ್ರನನ್ನು ನೋಡಲು ಬಂದಿದ್ದ ಪೋಷಕರು ಈ ಘಟನೆಯ ವರದಿ ಮಾಡಿದ್ದಾರೆ.
ಪದೇ ಪದೇ ಕರೆ ಮಾಡಿದರೂ, ವಿದ್ಯಾರ್ಥಿಯು ಕರೆ ಸ್ವೀಕರಿಸದೆ ಹೋದಾಗ ಆತನ ಪೋಷಕರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಬಲವಂತವಾಗಿ ಬಾಗಿಲನ್ನು ತೆರೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಾವಿನ ಕುರಿತು ಸಂಸ್ಥೆಯು ಆಂತರಿಕ ತನಿಖೆ ನಡೆಸಲಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ಘಟನೆಯ ಕುರಿತು ಪೊಲೀಸರೂ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಮೃತ ವಿದ್ಯಾರ್ಥಿ ಮಲಿಕ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.