"ವೇಟರ್‌ಗೆ ಆಹ್ವಾನ, ಪ್ರಧಾನಿಗೆ ಆಹ್ವಾನವಿಲ್ಲ": ಟ್ರಂಪ್‌ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಜೈಶಂಕರ್‌ ಗೆ ಆಹ್ವಾನ ಕುರಿತು ಸುಬ್ರಮಣಿಯನ್‌ ಸ್ವಾಮಿ ವ್ಯಂಗ್ಯ

Update: 2025-01-13 08:38 GMT

 ನರೇಂದ್ರ ಮೋದಿ , ಸುಬ್ರಮಣಿಯನ್ ಸ್ವಾಮಿ  | PTI

ಹೊಸದಿಲ್ಲಿ: ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಘೋಷಿಸಿರುವುದನ್ನು ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಸ್ವಾಮಿ, “ಟ್ರಂಪ್ ಅವರ ಅಮೆರಿಕ ಅಧ್ಯಕ್ಷರ ಔಪಚಾರಿಕ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ʼಭಾರತವನ್ನು ಆಹ್ವಾನಿಸಲಾಗಿದೆʼ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿದ ಸುದ್ದಿಯನ್ನು ನೋಡಿ ನನ್ನ ಅಮೆರಿಕದ ಸ್ನೇಹಿತರು ನಗುತ್ತಿದ್ದಾರೆ. ವೇಟರ್‌ಗೆ ಆಹ್ವಾನ ನೀಡಲಾಗಿದೆ ಆದರೆ ಪ್ರಧಾನಿಗೆ ಆಹ್ವಾನ ನೀಡಲಾಗಿಲ್ಲ!! ಇದು ಇನ್ನೂ ದೊಡ್ಡ ಅವಮಾನವಲ್ಲವೇ?ʼ ಎಂದು ಅವರು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ತರಲು ಪ್ರಧಾನಿ ಜೈಶಂಕರ್ ಅವರನ್ನು ಅಮೆರಿಕಕ್ಕೆ ಕಳುಹಿಸಿದ್ದಾರೆ ಎಂದು ಸ್ವಾಮಿ ಈ ಹಿಂದೆ ಆರೋಪಿಸಿದ್ದರು.

ಡಿಸೆಂಬರ್ 24-29 ರವರೆಗೆ ಜೈಶಂಕರ್ ಅಮೆರಿಕಕ್ಕೆ ಭೇಟಿ ನೀಡಿದ್ದರು, ಇದು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರ ಮೊದಲ ಅಧಿಕೃತ ಭೇಟಿಯಾಗಿತ್ತು.

ಈ ಹಿನ್ನೆಲೆಯಲ್ಲಿ, ಸ್ವಾಮಿ ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದ್ದರು.

"ಮೋದಿ ಅವರು ವೇಟರ್ ಅವರನ್ನು ಅಮೆರಿಕಕ್ಕೆ ಕಳುಹಿಸಿ, ಮೋದಿಗೆ ಆಹ್ವಾನವನ್ನು ಒದಗಿಸುವಂತೆ ಹೇಳಿದ್ದಾರೆ, ಇಲ್ಲದಿದ್ದರೆ ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಆದರೆ ಪ್ರಸ್ತುತ, ಡೊನಾಲ್ಡ್ ಟ್ರಂಪ್ ಅವರು ಮೋದಿಯನ್ನು ಆಹ್ವಾನಿಸುವ ಮನಸ್ಥಿತಿಯಲ್ಲಿಲ್ಲ" ಎಂದು ಸ್ವಾಮಿ X ನಲ್ಲಿ ಜನವರಿ 20 ರಂದು ನಡೆಯಲಿರುವ ಉದ್ಘಾಟನೆಯನ್ನು ಉಲ್ಲೇಖಿಸಿ ಹೇಳಿದ್ದರು.

ಸ್ವಾಮಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿಯ ಮೇಲೆ ವಾಗ್ದಾಳಿ ನಡೆಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಮೋದಿಯನ್ನು 'ಸುಳ್ಳುಗಾರ' ಎಂದು ಕರೆದಿದ್ದರು. ಹಾಗೂ 2014 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ಮಾಡಿದ್ದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News