ಗಡಿ ವಿವಾದ : ಬಾಂಗ್ಲಾದೇಶದ ಉಪ ರಾಯಭಾರಿಗೆ ಭಾರತ ಸಮನ್ಸ್

Update: 2025-01-13 10:43 GMT

Photo credit: ANI

ಹೊಸದಿಲ್ಲಿ: ಗಡಿಯಲ್ಲಿ ತಂತಿ ಬೇಲಿ ನಿರ್ಮಾಣಕ್ಕೆ ಸಂಬಂಧಿಸಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಕುರಿತು ಚರ್ಚಿಸಲು ಭಾರತದ ವಿದೇಶಾಂಗ ಸಚಿವಾಲಯ ಬಾಂಗ್ಲಾದೇಶದ ಉಪ ರಾಯಭಾರಿ ನುರಾಲ್ ಇಸ್ಲಾಂ ಅವರಿಗೆ ಸಮನ್ಸ್ ನೀಡಿದೆ.

ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ರವಿವಾರ ಢಾಕಾದ ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರಿಗೆ ಸಮನ್ಸ್ ಜಾರಿ ಮಾಡಿದ ಒಂದು ದಿನದ ನಂತರ ಬಾಂಗ್ಲಾದೇಶದ ಉಪ ಹೈಕಮಿಷನರ್ ಗೆ ಭಾರತ ಸಮನ್ಸ್ ನೀಡಿದೆ.

ರವಿವಾರ ಭಾರತದ ರಾಯಭಾರಿ ಪ್ರಣಯ್ ವರ್ಮಾ ಅವರನ್ನು ಕಚೇರಿಗೆ ಕರೆಸಿಕೊಂಡಿದ್ದ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಭಾರತ-ಬಾಂಗ್ಲಾ ಗಡಿಯಲ್ಲಿ, ಐದು ಸ್ಥಳಗಳಲ್ಲಿ ತಂತಿ ಬೇಲಿ ನಿರ್ಮಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು. ಈ ಕ್ರಮಗಳು ಗಡಿ ಚಟುವಟಿಕೆಗಳನ್ನು ನಿಯಂತ್ರಿಸುವ ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು.

ವರ್ಮಾ ಸ್ಥಳೀಯ ಸಮಯ ಮಧ್ಯಾಹ್ನ 3ರ ಸುಮಾರಿಗೆ ಢಾಕಾದಲ್ಲಿರುವ ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಗೆ ಆಗಮಿಸಿದರು. ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಜಶಿಮ್ ಉದ್ದೀನ್ ಅವರೊಂದಿಗಿನ ಸಭೆ ಸುಮಾರು 45 ನಿಮಿಷಗಳ ಕಾಲ ನಡೆಯಿತು ಎಂದು ಬಾಂಗ್ಲಾದ ಸರಕಾರಿ ಮಾಧ್ಯಮಗಳು ವರದಿ ಮಾಡಿತ್ತು.

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧಗಳು ಐತಿಹಾಸಿಕವಾಗಿ ಉತ್ತಮವಾಗಿತ್ತು. ಬಾಂಗ್ಲಾದೇಶದಲ್ಲಿ ಬಿಕ್ಕಟ್ಟಿನ ಬಳಿಕ ದೇಶ ತೊರೆದು ಶೇಕ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಆ ಬಳಿಕ ಢಾಕಾದಲ್ಲಿ ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರ ಮತ್ತು ಭಾರತದ ನಡುವಿನ ಸಂಬಂಧ ಹದಗೆಡುತ್ತಾ ಸಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News