ಉಕ್ರೇನ್-ರಶ್ಯ ಯುದ್ಧ ವಲಯದಲ್ಲಿ ಸಿಲುಕಿಕೊಂಡಿದ್ದ ಕೇರಳ ನಿವಾಸಿ ಮೃತ್ಯು
ತಿರುವನಂತಪುರಂ: ಇತ್ತೀಚೆಗೆ ನಡೆದ ಸಂಘರ್ಷದ ಸಂದರ್ಭದಲ್ಲಿ ಉಕ್ರೇನ್-ರಶ್ಯ ಯುದ್ಧ ವಲಯದಲ್ಲಿ ಸಿಲುಕಿಕೊಂಡಿದ್ದ 32 ವರ್ಷದ ಕೇರಳ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ತ್ರಿಶೂರ್ ನಿವಾಸಿಯಾದ ಬಿನಿಲ್ ಬಾಬು ಅವರ ಕುಟುಂಬದ ಸದಸ್ಯರು ಅವರ ಮೃತ್ಯುವಿನ ಸುದ್ದಿಯನ್ನು ಯುದ್ಧ ವಲಯದಲ್ಲಿದ್ದ ಮತ್ತೊಬ್ಬ ಕೇರಳಿಗರಿಂದ ಹಾಗೂ ರಾಜತಾಂತ್ರಿಕ ಕಚೇರಿಯ ಅಧಿಕಾರಿಗಳಿಂದಲೂ ಸ್ವೀಕರಿಸಿದ್ದಾರೆ. ಆದರೆ, ಈ ಕುರಿತು ಇನ್ನೂ ಅಧಿಕೃತ ದೃಢೀಕರಣ ಹೊರ ಬೀಳಬೇಕಿದೆ.
ಜೂನ್ 2024ರಿಂದ ಜೈನ್ ಕುರಿಯನ್ (27)ರೊಂದಿಗೆ ಬಿನಿಲ್ ಉಕ್ರೇನ್-ರಶ್ಯ ಯುದ್ಧ ವಲಯದಲ್ಲಿ ಸಿಲುಕಿಕೊಂಡಿದ್ದರು. ಎಲೆಕ್ಟ್ರಿಷಿಯನ್ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿದ್ದ ಉದ್ಯೋಗ ನೇಮಕಾತಿ ಸಂಸ್ಥೆಯೊಂದು, ಅವರನ್ನು ಅಕ್ರಮವಾಗಿ ರಶ್ಯ ಸೇನೆಗೆ ಸೇರ್ಪಡೆ ಮಾಡಿತ್ತು ಎನ್ನಲಾಗಿದೆ.
ಅವರು ಕಳೆದ ಕೆಲವು ದಿನಗಳಿಂದ ಯುದ್ಧ ವಲಯದಿಂದ ಪಾರಾಗುವ ಪ್ರಯತ್ನ ನಡೆಸುತ್ತಿದ್ದರು. ಸಂಘರ್ಷದ ವೇಳೆ ಗಾಯಗೊಂಡಿರುವ ಕುರಿಯನ್ ಕೂಡಾ ಮಾಸ್ಕೊದಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ ಎಂಬ ವರದಿಗಳಿವೆ.
ಆಗಸ್ಟ್ 2024ರಲ್ಲಿ ಮತ್ತೊಬ್ಬ ತ್ರಿಶೂರ್ ನಿವಾಸಿಯಾದ ಮಲೆಯಾಳಿ ಭಾಷಿಕರು ಉಕ್ರೇನ್-ರಶ್ಯ ಯುದ್ಧ ವಲಯದಲ್ಲಿ ಮೃತಪಟ್ಟಿದ್ದರು. 36 ವರ್ಷದ ಮೃತ ಸಂದೀಪ್ ತ್ರಿಶೂರ್ ನಲ್ಲಿನ ಚಾಲಕುಡಿ ಬಳಿಯ ನಾಯರಂಗಡಿ ನಿವಾಸಿಯಾಗಿದ್ದರು. ಅವರನ್ನೂ ಕೂಡಾ ಅಕ್ರಮವಾಗಿ ರಶ್ಯ ಸೇನೆಗೆ ಸೇರ್ಪಡೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.