UFC ಸ್ಟಾರ್ ಖಬೀಬ್ ರನ್ನು ವಿಮಾನದಿಂದ ಇಳಿಸಿದ ಸಿಬ್ಬಂದಿ : ಜನಾಂಗೀಯ ತಾರತಮ್ಯವೇ ಎಂದು ಪ್ರಶ್ನಿಸಿದ ಮಾಜಿ ಚಾಂಪಿಯನ್

Update: 2025-01-13 12:41 GMT

ಖಬೀಬ್ ನೂರ್ ಮೊಹಮದೊವ್ | P[C :  X \ @TeamKhabib

ವಾಷಿಂಗ್ಟನ್: ಲಾಸ್ ವೇಗಾಸ್ ವಿಮಾನ ನಿಲ್ದಾಣದಲ್ಲಿ ಮಾಜಿ ಯುಎಫ್ ಸಿ (UFC) ಚಾಂಪಿಯನ್ ಖಬೀಬ್ ನೂರ್ ಮೊಹಮದೊವ್ ಅವರನ್ನು ಫ್ರಾಂಟಿಯರ್ (Frontier Airlines) ವಿಮಾನದಿಂದ ಸಿಬ್ಬಂದಿಗಳು ಕೆಳಗಿಳಿಸಿದ್ದಾರೆ. ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಖಬೀಬ್ ನೂರ್ ಮೊಹಮದೊವ್, ಯಾಕೆ ಈ ರೀತಿ ಮಾಡಿದ್ದಾರೆ? ನನ್ನ ಜನಾಂಗೀಯತೆ, ನನ್ನ ರಾಷ್ಟ್ರೀಯತೆ ಇದಕ್ಕೆ ಕಾರಣವಾಗಿದೆಯಾ ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೊಗಳಲ್ಲಿ ಓರ್ವ ವಿಮಾನ ಸಿಬ್ಬಂದಿ ಖಬೀಬ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದನ್ನು, ಸೀಟುಗಳನ್ನು ಬದಲಾಯಿಸಲು ಕೇಳಿಕೊಳ್ಳುತ್ತಿರುವುದನ್ನು ತೋರಿಸುತ್ತದೆ. ಈ ವೇಳೆ ಮಾಜಿ UFC ಸ್ಟಾರ್ ಅದಕ್ಕೆ ಒಪ್ಪದೆ 'ಅನ್ಯಾಯ' ಎಂದು ಹೇಳುವುದು ವೀಡಿಯೊದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಖಬೀಬ್ ಎಕ್ಸ್ ನಲ್ಲಿ ಬರೆದುಕೊಂಡಿದ್ದು, ಇದು ʼಅಲಾಸ್ಕಾ ಏರ್ʼ (Alaska Airlines) ಅಲ್ಲ, ಇದು ಫ್ಲೈ ಫ್ರಾಂಟಿಯರ್ ಎಂದು ನಾನು ಸ್ಪಷ್ಟಪಡಿಸುತ್ತೇನೆ. ವೀಡಿಯೊದಲ್ಲಿರುವಂತೆ ಪ್ರಶ್ನೆಗಳನ್ನು ಕೇಳಿಕೊಂಡು ನನ್ನ ಬಳಿಗೆ ಬಂದ ಮಹಿಳೆ ಮೊದಲಿನಿಂದಲೂ ತೀರಾ ಅಸಭ್ಯವಾಗಿ ವರ್ತಿಸುತ್ತಿದ್ದರು. ನಾನು ಇಂಗ್ಲೀಷ್ ಮಾತನಾಡಬಲ್ಲೆ ಮತ್ತು ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಲ್ಲೆ, ಅವರು ನನ್ನನ್ನು ನನ್ನ ಸೀಟಿನಿಂದ ತೆರಳುವಂತೆ ಹೇಳಿದ್ದಾರೆ. ಅದಕ್ಕೆ ಮೂಲ ಕಾರಣವೇನು? ಜನಾಂಗೀಯತೆಯ, ರಾಷ್ಟ್ರೀಯತೆಯ ಅಥವಾ ಇನ್ನಾವುದೋ ? ನನಗೆ ಖಚಿತವಿಲ್ಲ ಎಂದು ಹೇಳಿದ್ದಾರೆ.

Full View

2 ನಿಮಿಷಗಳ ಸಂಭಾಷಣೆಯ ನಂತರ ಅವರು ಭದ್ರತಾ ಸಿಬ್ಬಂದಿಗೆ ಕರೆ ಮಾಡಿದರು ಮತ್ತು ನನ್ನನ್ನು ಈ ವಿಮಾನದಿಂದ ಕೆಳಗಿಳಿಸಲಾಯಿತು. ಒಂದೂವರೆ ಗಂಟೆಯ ನಂತರ ನಾನು ಇನ್ನೊಂದು ವಿಮಾನ ಹತ್ತಿದೆ ಮತ್ತು ನನಗೆ ಹೋಗಬೇಕಾದಲ್ಲಿ ತೆರಳಿದೆ. ನೀವು ವೀಡಿಯೊದಲ್ಲಿ ನೋಡಿದಂತೆ ನಾನು ಶಾಂತವಾಗಿ ಮತ್ತು ಗೌರವದಿಂದ ಇರಲು ನನ್ನ ಕೈಲಾದಷ್ಟು ಪ್ರಯತ್ನಿಸಿದೆ ಎಂದು ಖಬೀಬ್ ಹೇಳಿದ್ದಾರೆ.

ಲಾಸ್ ವೇಗಾಸ್ ನಿಂದ ಲಾಸ್ ಏಂಜಲೀಸ್ ಗೆ ತೆರಳುವ ಫ್ರಾಂಟಿಯರ್ (Frontier Airlines)ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News