ತಿರುಮಲ ದೇವಳದ ಲಡ್ಡು ಕೌಂಟರ್‌ನಲ್ಲಿ ಬೆಂಕಿ, ದಿಕ್ಕಾಪಾಲಾಗಿ ಓಡಿದ ಭಕ್ತರು

Update: 2025-01-13 15:22 GMT

PC : PTI 

ತಿರುಪತಿ : ಇತ್ತೀಚಿನ ಕಾಲ್ತುಳಿತ ಘಟನೆಯ ನೆನಪು ಮಾಸುವ ಮುನ್ನವೇ ಇನ್ನೊಂದು ಅವಘಡಕ್ಕೆ ತಿರುಪತಿ ಸಾಕ್ಷಿಯಾಗಿದೆ. ಸೋಮವಾರ ತಿರುಮಲದ ಶ್ರೀವೆಂಕಟೇಶ್ವರ ದೇವಸ್ಥಾನದ ಲಡ್ಡು ವಿತರಣೆ ಕೌಂಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಆತಂಕಗೊಂಡ ಭಕ್ತರು ದಿಕ್ಕಾಪಾಲಾಗಿ ಓಡುವಂತೆ ಮಾಡಿತ್ತು. ಬೆಂಕಿಯ ಬೆನ್ನಲ್ಲೇ ಇಡೀ ಆವರಣದಲ್ಲಿ ಹೊಗೆ ತುಂಬಿಕೊಂಡಿತ್ತು.

ಬೆಂಕಿ ಆಕಸ್ಮಿಕದ ವಿವರಗಳನ್ನು ನೀಡಿದ ತಿರುಪತಿ ತಿರುಮಲ ದೇವಸ್ಥಾನಂ ಮಂಡಳಿಯ ಜೆಇಒ ವೆಂಕಯ್ಯ ಚೌಧರಿ, ಭಕ್ತರಿಗೆ ಲಡ್ಡು ಪ್ರಸಾದ ವಿತರಿಸುತ್ತಿದ್ದ ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಇದು ಸೇರಿದ್ದ ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಕಂಪ್ಯೂಟರ್‌ಗೆ ಜೋಡಿಸಿದ್ದ ಯುಪಿಎಸ್ ಸಿಸ್ಟಮ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ 47ನೇ ಸಂಖ್ಯೆಯ ಕೌಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದರು ಎಂದು ತಿಳಿಸಿದರು.

ಜ.8ರಂದು ರಾತ್ರಿ ದೇವಸ್ಥಾನದ ಆವರಣದಲ್ಲಿಯ ವೈಕುಂಠ ದ್ವಾರ ದರ್ಶನದ ಟಿಕೆಟ್‌ಗಳನ್ನು ವಿತರಿಸುವ ಕೌಂಟರ್ ಬಳಿ ಕಾಲ್ತುಳಿತ ಸಂಭವಿಸಿ ಆರು ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಆಂಧ್ರಪ್ರದೇಶ ಸರಕಾರವು ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ.ಗಳ ಪರಿಹಾರವನ್ನು ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News