ಜಮ್ಮು-ಕಾಶ್ಮೀರದಲ್ಲಿ ಹತರಾಗಿರುವ 60 ಶೇ. ಭಯೋತ್ಪಾದಕರು ಪಾಕಿಸ್ತಾನೀಯರು : ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ

Update: 2025-01-13 15:44 GMT

ಉಪೇಂದ್ರ ದ್ವಿವೇದಿ | PC :  X  

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟಿರುವ ಭಯೋತ್ಪಾದಕರ ಪೈಕಿ 60 ಶೇಕಡ ಪಾಕಿಸ್ತಾನಿ ರಾಷ್ಟ್ರೀಯರಾಗಿದ್ದಾರೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸೋಮವಾರ ಹೇಳಿದ್ದಾರೆ.

ಉತ್ತರದ ಗಡಿಗಳಲ್ಲಿರುವ ಭದ್ರತಾ ಸಮಸ್ಯೆಗಳ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಲ್ಲಿನ ಪರಿಸ್ಥಿತಿ ‘‘ಸೂಕ್ಷ್ಮವಾಗಿದೆಯಾದರೂ ಸ್ಥಿರವಾಗಿದೆ’’ ಎಂದು ಹೇಳಿದರು.

‘‘ನಾನು ಮೊದಲು ಉತ್ತರದ ಗಡಿಗಳ ಭದ್ರತಾ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ. ನಿಮಗೆಲ್ಲರಿಗೂ ತಿಳಿದಿರುವಂತೆ ಅಲ್ಲಿನ ಪರಿಸ್ಥಿತಿ ಸೂಕ್ಷ್ಮವಾಗಿದೆ, ಆದರೆ ಸ್ಥಿರವಾಗಿದೆ’’ ಎಂದು ದ್ವಿವೇದಿ ಹೇಳಿದರು.

ಅದೇ ವೇಳೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿರುವ 80 ಶೇಕಡ ಭಯೋತ್ಪಾದಕರು ಕೂಡ ಪಾಕಿಸ್ತಾನದವರು ಎಂದು ಸೇನಾಧಿಕಾರಿ ತಿಳಿಸಿದರು.

‘‘ಜಮ್ಮು ಮತ್ತು ಕಾಶ್ಮೀರದಲ್ಲಿ ಹತರಾಗಿರುವ ಭಯೋತ್ಪಾದಕರ ಪೈಕಿ 60 ಶೇಕಡ ಪಾಕಿಸ್ತಾನಿಗಳು. ರಾಜ್ಯದಲ್ಲಿ ಸಕ್ರಿಯರಾಗಿರುವ ಭಯೋತ್ಪಾದಕರ ಪೈಕಿ 80 ಶೇಕಡ ಮಂದಿ ಕೂಡ ಪಾಕಿಸ್ತಾನೀಯರು’’ ಎಂದು ದ್ವಿವೇದಿ ನುಡಿದರು.

ಪೂರ್ವ ಲಡಾಖ್‌ನ ಡೆಪ್ಸಂಗ್ ಮತ್ತು ಡೆಮ್ಚೊಕ್ ವಲಯಗಳಲ್ಲಿನ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ. ಗಸ್ತು ಮತ್ತು ಜಾನುವಾರುಗಳನ್ನು ಮೇಯಿಸುವ ವಿಚಾರದಲ್ಲಿ, ವಿಷಯಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲು ಎಲ್ಲಾ ಸಹ ಕಮಾಂಡರ್‌ಗಳಿಗೆ ಅಧಿಕಾರ ನೀಡಲಾಗಿದೆ ಎಂದು ಅವರು ತಿಳಿಸಿದರು.

‘‘ಅಕ್ಟೋಬರ್‌ನಲ್ಲಿ, ಡೆಪ್ಸಂಗ್ ಮತ್ತು ಡೆಮ್ಚೊಕ್‌ಗಳಲ್ಲಿನ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ. ಈ ಎರಡು ವಲಯಗಳಲ್ಲಿ ಸಾಂಪ್ರದಾಯಿಕ ಗಸ್ತನ್ನು ಪುನರಾರಂಭಿಸಲಾಗಿದೆ. ಅದೂ ಅಲ್ಲದೆ, ಈ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮೇಯಿಸುವಿಕೆಯೂ ಆರಂಭವಾಗಿದೆ. ಗಸ್ತು ಮತ್ತು ಮೇಯಿಸುವಿಕೆಯಂಥ ವಿಷಯಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುವಂತೆ ನಾನು ನನ್ನ ಕಮಾಂಡರ್‌ಗಳಿಗೆ ಸೂಚನೆ ನೀಡಿದ್ದೇನೆ. ಹಾಗಾಗಿ, ಇಂಥ ಕ್ಷುಲ್ಲಕ ವಿಷಯಗಳು ಸೇನಾ ಮಟ್ಟದಲ್ಲೇ ಇತ್ಯರ್ಥಗೊಳ್ಳಲಿವೆ’’ ಎಂದು ಅವರು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News