ಮಹಾಕುಂಭ ಮೇಳದ ಮೊದಲ ದಿನ 1.7 ಕೋಟಿ ಭಕ್ತರಿಂದ ಪವಿತ್ರ ಸ್ನಾನ
ಪ್ರಯಾಗ್‌ರಾಜ್: ಪೌಷಪೂರ್ಣಿಮೆಯ ದಿನವಾದ ಸೋಮವಾರ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಂಗಮಕ್ಷೇತ್ರದಲ್ಲಿ 1.7 ಕೋಟಿ ಭಕ್ತರು ಮೈಕೊರೆಯುವ ಚಳಿಯಲ್ಲಿ ಪವಿತ್ರ ಸ್ನಾನ ಕೈಗೊಳ್ಳುವ ಮೂಲಕ ಮಹಾಕುಂಭ ಮೇಳಕ್ಕೆ ಚಾಲನೆ ದೊರಕಿದೆ.
ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್‌ಗಳಿಂದ ಗುಲಾಬಿ ಎಸಳುಗಳನ್ನು ಮಳೆಗೆರೆಯಲಾಯಿತು. ಪೌಷ ಪೂರ್ಣಿಮೆಯ ದಿನ ಪವಿತ್ರ ಸ್ನಾನವು 45 ದಿನಗಳ ಮಹಾಕುಂಭ ಮೇಳದ ಅಧಿಕೃತ ಚಾಲನೆ ಎನಿಸಿದ್ದು, ಮುಂಜಾನೆಯಿಂದ ಮುಸ್ಸಂಜೆಯ ವರೆಗೂ ಭಕ್ತರು ಹಿಂಡು ಹಿಂಡಾಗಿ ಆಗಮಿಸಿ ಸ್ನಾನ ಮಾಡುವ ದೃಶ್ಯ ಕಂಡುಬಂತು.
10 ಸಾವಿರ ಎಕರೆಯ ವಿಶಾಲ ಕುಂಭಮೇಳ ಪ್ರದೇಶ ಏಳು ಸುತ್ತಿನ ಭದ್ರತಾ ಕೋಟೆಯಿಂದ ಸುತ್ತುವರಿದಿದ್ದು, ಯಾತ್ರಿಗಳ ಸುರಕ್ಷತೆಗೆ ಗಮನ ಹರಿಸಲಾಗಿದೆ. 45 ದಿನಗಳ ಅವಧಿಯಲ್ಲಿ 40 ಕೋಟಿಗೂ ಅಧಿಕ ಮಂದಿ ಪವಿತ್ರಸ್ನಾನ ಕೈಗೊಳ್ಳುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ಒಟ್ಟು ಆರು ಪವಿತ್ರಸ್ನಾನಗಳು ನಡೆಯಲಿವೆ. ಮೊದಲ ಎರಡು ಸ್ನಾನಗಳ ಹೊರತಾಗಿ ಜನವರಿ 29ರ ಮೌನಿ ಅಮಾವಾಸ್ಯೆ, ಫೆಬ್ರುವರಿ 3ರಂದು ಬಸಂತ ಪಂಚಮಿ, ಫೆಬ್ರುವರಿ 12ರ ಮಾಘ ಪೂರ್ಣಿಮೆ ಮತ್ತು ಫೆಬ್ರುವರಿ 26ರ ಮಹಾಶಿವರಾತ್ರಿ ಸಂದರ್ಭದಲ್ಲಿ ಪವಿತ್ರಸ್ನಾನ ಇರುತ್ತದೆ. ಇದರೊಂದಿಗೆ ಮಹಾಕುಂಭ ಮುಕ್ತಾಯವಾಗುತ್ತದೆ.