ಲೈಂಗಿಕ ಕಿರುಕುಳ ಪ್ರಕರಣ | ಆಸಾರಾಮ್ ಬಾಪುಗೆ ಮಧ್ಯಂತರ ಜಾಮೀನು

Update: 2025-01-14 15:50 GMT

ಆಸಾರಾಮ್ ಬಾಪು | PC : PTI 

ಜೈಪುರ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ 2013ರಲ್ಲಿ ಜೀವಾವಧಿ ಶಿಕ್ಷೆ ಒಳಗಾಗಿರುವ ನಕಲಿ ಧಾರ್ಮಿಕ ನಾಯಕ ಆಸಾರಾಮ್ ಬಾಪುಗೆ ರಾಜಸ್ಥಾನ ಉಚ್ಛ ನ್ಯಾಯಾಲಯ ಮಾರ್ಚ್ 31ರ ವರೆಗೆ ಮಧ್ಯಂತರ ಜಾಮೀನು ನೀಡಿದೆ.

ಅತ್ಯಾಚಾರ ಪ್ರಕರಣದಲ್ಲಿ ಆಸಾರಾಮ್ ಬಾಪುಗೆ ಸುಪ್ರೀಂ ಕೋರ್ಟ್ ಮಾರ್ಚ್ 31ರ ವರೆಗೆ ಮಧ್ಯಂತರ ಜಾಮೀನು ನೀಡಿದ ಒಂದು ವಾರದ ಬಳಿಕ ರಾಜಸ್ಥಾನ ಉಚ್ಚ ನ್ಯಾಯಾಲಯ ಈ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕ ಆಸಾರಾಮ್ ಬಾಪು ಅವರ ವಕೀಲ ನಿಶಾಂತ್ ಬೋರಾ ಅವರ ಶಿಕ್ಷೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಜಸ್ಥಾನ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ತಾ ಹಾಗೂ ವಿನೀತ್ ಕುಮಾರ್ ಮಾಥುರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮಂಗಳವಾರ ಆಸಾರಾಮ್ ಬಾಪುಗೆ ಮಧ್ಯಂತರ ಜಾಮೀನು ನೀಡಿತು.

ಮಧ್ಯಂತರ ಜಾಮೀನಿನ ಷರತ್ತುಗಳಲ್ಲಿ ಒಂದು ಷರತ್ತು ಹೊರತುಪಡಿಸಿದರೆ ಉಳಿದಂತೆ ಸುಪ್ರೀಂ ಕೋರ್ಟ್ ಜನವರಿ 7ರಂದು ನೀಡಿದ ಮಧ್ಯಂತರ ಜಾಮೀನಿನ ಷರತ್ತಿನಂತೆ ಇದೆ ಎಂದು ನಿಶಾಂತ್ ಬೋರಾ ತಿಳಿಸಿದ್ದಾರೆ.

ಒಂದು ವೇಳೆ ಆಸಾರಾಮ್ ಬಾಪು ಹೊರಗಡೆ (ಜೋಧಪುರ) ಪ್ರಯಾಣಿಸಲು ಬಯಸಿದರೆ, ಅವರೊಂದಿಗೆ ಹೋಗುವ ಮೂವರು ಕಾನ್ಸ್‌ಟೇಬಲ್‌ಗಳ ವೆಚ್ಚವನ್ನು ಅವರೇ ಭರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಹಾಗೂ ಪೋಕ್ಸೊ ಅಡಿಯಲ್ಲಿ ಆರೋಪ ಎದುರಿಸುತ್ತಿರುವ 86 ವರ್ಷದ ಆಸಾರಾಮ್ ಬಾಪು 2013 ಆಗಸ್ಟ್ 31ರಿಂದ ಕಸ್ಟಡಿಯಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News