ರೈತ ಒಕ್ಕೂಟಗಳು ಸಂಘಟಿತವಾದರೆ ಪಂಜಾಬ್ ರೈತರ ಹೋರಾಟಕ್ಕೆ ಬೆಂಬಲ : ಹರ್ಯಾಣ ಖಾಪ್ ಪಂಚಾಯತ್ ನಿರ್ಧಾರ

Update: 2025-01-14 15:47 GMT

ಸಾಂದರ್ಭಿಕ ಚಿತ್ರ | PC : PTI

ಚಂಡಿಗಢ : ಜನವರಿ 18ರ ಸಭೆಯ ಬಳಿಕ ಎಲ್ಲಾ ರೈತರ ಒಕ್ಕೂಟಗಳು ಒಂದೇ ವೇದಿಕೆ ಅಡಿಯಲ್ಲಿ ಸಂಘಟಿತವಾದರೆ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಘೋಷಿಸಿದರೆ ಪಂಜಾಬ್‌ನಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡಲು ಹರ್ಯಾಣದ ಖಾಪ್ ಪಂಚಾಯತ್ ನಿರ್ಧರಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ 102 ಖಾಪ್ ಪಂಚಾಯತ್‌ಗಳ 11 ಸದಸ್ಯರ ಸಮಿತಿಯ ಸಂಚಾಲಕ ಹಾಗೂ ಸತರೋಲ್ ಖಾಪ್‌ನ ಸದಸ್ಯ ಸತೀಶ್ ಸಿಂಗ್, ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ-ರಾಜಕೀಯೇತರ ಸಂಘಟನೆ) ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಒಂದೇ ವೇದಿಕೆಯ ಅಡಿಯಲ್ಲಿ ಸಂಘಟಿತರಾಗಬೇಕು. ಅಲ್ಲದೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಘೋಷಿಸುವ ಮೂಲಕ ಕೇಂದ್ರ ಸರಕಾರವನ್ನು ಸಂಘಟಿತವಾಗಿ ಎದುರಿಸಬೇಕು ಎಂದಿದ್ದಾರೆ.

ಅವರು (ರೈತರು) ಪಂಜಾಬ್‌ನ ಪತ್ರಾನ್‌ ನಲ್ಲಿ ಸೋಮವಾರ ಸಭೆ ನಡೆಸಿದ್ದಾರೆ. ಇನ್ನು ಅವರು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಜನವರಿ 18ರಂದು ಮತ್ತೆ ಸಭೆ ಸೇರಲಿದ್ದಾರೆ. ಅನಂತರ ಹರ್ಯಾಣ ಖಾಪ್ ಪಂಚಾಯತ್‌ನ ನಮ್ಮ ಸಮಿತಿ ಜನವರಿ 19 ಅಥವಾ 20ರಂದು ಸಭೆ ನಡೆಸಲಿದೆ. ಆ ಸಭೆಯಲ್ಲಿ ಪ್ರತಿಭಟನೆಗೆ ಬೆಂಬಲ ನೀಡುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಈ ಹಿಂದೆ ಕೂಡ ನಾವು ಪರಸ್ಪರ ಕೈಜೋಡಿಸುವಂತೆ ವಿನಂತಿಸಿದ್ದೆವು. ಹಾಗಾದರೆ, ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದೆವು ಎಂದು ಅವರು ತಿಳಿಸಿದ್ದಾರೆ.

ಪ್ರತಿಭಟನೆಯನ್ನು ಸಶಕ್ತಗೊಳಿಸಲು ಜನವರಿ 26ರ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಖಾಪ್ ಪಂಚಾಯತ್‌ಗಳು ಪಾಲ್ಗೊಳ್ಳಲಿವೆ ಎಂದು ಸಿಂಗ್ ಹೇಳಿದ್ದಾರೆ.

ಫೋಗಟ್ ಖಾಪ್‌ನ ವರಿಷ್ಠ ಸುರೇಶ್ ಫೋಗಟ್, ಬಾಸ್ ಗ್ರಾಮದಲ್ಲಿ ಕಳೆದ ತಿಂಗಳು ಆಯೋಜಿಸಲಾಗಿದ್ದ ಪಂಚಾಯತ್‌ನಲ್ಲಿ ಸಂಘಟಿತರಾಗುವಂತೆ ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಮಷ್ಠಿಯಾಗಿ ಹೋರಾಡುವಂತೆ ಪಂಜಾಬ್‌ನ ರೈತ ಸಂಘಟನೆಗಳನ್ನು ಆಗ್ರಹಿಸಿದ್ದೆವು ಎಂದು ಅವರು ಹೇಳಿದ್ದಾರೆ.

ಇದಕ್ಕಿಂತ ಮುನ್ನ ನಮ್ಮ ನಿಯೋಗ ಖನೌರಿ ಗಡಿಯಲ್ಲಿ ನವೆಂಬರ್ 26ರಿಂದ ಅಮರಣಾಂತ ಉಪವಾಸ ನಡೆಸುತ್ತಿರುವ ಜಗಜೀತ್ ಸಿಂಗ್ ದಲ್ಲೇವಾಲ್ ಅವರನ್ನು ಭೇಟಿಯಾಯಿತು. ರೈತರ ಸಂಘಟನೆಗಳ ನಡುವೆ ನಡೆಯುತ್ತಿರುವ ಮಾತುಕತೆಯ ಅಂತಿಮ ಫಲಿತಾಂಶವನ್ನು ನಾವು ಈಗಲೂ ಕಾಯುತ್ತಿದ್ದೇವೆ. ಜನವರಿ 18ರ ಸಭೆಯ ಬಳಿಕ ಸಕರಾತ್ಮಕ ಫಲಿತಾಂಶ ಬಂದರೆ ಹಾಗೂ ಒಂದೇ ವೇದಿಕೆ ಅಡಿಯಲ್ಲಿ ಸಂಘಟಿತರಾಗಲು ಅವರು ನಿರ್ಧರಿಸಿದರೆ, ನಾವು ಬೆಂಬಲ ನೀಡಲು ಹಾಗೂ ನಮ್ಮ ಕಾರ್ಯತಂತ್ರವನ್ನು ರೂಪಿಸಲು ಸಭೆ ನಡೆಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News