ಮಕರ ಸಂಕ್ರಾಂತಿ: ಪಶ್ಚಿಮ ಬಂಗಾಳದ ಗಂಗಾಸಾಗರದಲ್ಲಿ ಪುಣ್ಯಸ್ನಾನ ಮಾಡಿದ ಸಾವಿರಾರು ಯಾತ್ರಿಗಳು
ಕೋಲ್ಕತಾ: ಗಂಗಾ ನದಿಯು ಬಂಗಾಳ ಕೊಲ್ಲಿಯನ್ನು ಸೇರುವ ದಕ್ಷಿಣ 24 ಪರಗಣಗಳ ಜಿಲ್ಲೆಯ ಸಾಗರ ದ್ವೀಪದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ನಡೆಯುತ್ತಿರುವ ಗಂಗಾಸಾಗರ ಮೇಳದಲ್ಲಿ ಮಂಗಳವಾರ ಸಾವಿರಾರು ಯಾತ್ರಾರ್ಥಿಗಳು ಪುಣ್ಯಸ್ನಾನವನ್ನು ಮಾಡಿದರು.
ಪೌಷ ಸಂಕ್ರಾಂತಿ ಎಂದೂ ಕರೆಯಲಾಗುವ ಮಕರ ಸಂಕ್ರಾಂತಿಯು ಗಂಗಾಸಾಗರ ಮೇಳದ ಅತ್ಯಂತ ಪವಿತ್ರ ದಿನವಾಗಿದ್ದು,ಭಾರೀ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸಿದ್ದರು. ಪುಣ್ಯಸ್ನಾನದ ಬಳಿಕ ಯಾತ್ರಾರ್ಥಿಗಳು ಕಪಿಲ ಮುನಿ ಆಶ್ರಮಕ್ಕೆ ತೆರಳಿ ಅಲ್ಲಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಜ.9ರಂದು ಆರಂಭಗೊಂಡ ಮೇಳ ಜ.17ರವರೆಗೆ ನಡೆಯಲಿದೆ.
ಪಶ್ಚಿಮ ಬಂಗಾಳ ಸರಕಾರದ ಪ್ರಕಾರ ಸೋಮವಾರದವರೆಗೆ ಗಂಗಾಸಾಗರ ಮೇಳಕ್ಕೆ 55 ಲಕ್ಷ ಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದರು. ಮಂಗಳವಾರ ಇನ್ನೂ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡಿದ್ದಾರೆ.
ಅತ್ತ ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವುದರಿಂದ ಈ ವರ್ಷ ಗಂಗಾಸಾಗರಕ್ಕೆ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂದು ಪಶ್ಚಿಮ ಬಂಗಾಳ ಸರಕಾರವು ನಿರೀಕ್ಷಿಸಿತ್ತು. ಆದರೆ ಅಂಕಿಅಂಶಗಳು ಈ ವರ್ಷ ಗಂಗಾಸಾಗರಕ್ಕೆ ದಾಖಲೆ ಸಂಖ್ಯೆಯಲ್ಲಿ ಯಾತ್ರಿಗಳು ಭೇಟಿ ನೀಡುತ್ತಿರುವುದನ್ನು ಸೂಚಿಸಿವೆ.
ಯಾತ್ರಿಗಳ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಭಾರೀ ಬಂದೋಬಸ್ತ್ ಕಲ್ಪಿಸಿರುವ ಸರಕಾರವು 13,000ಕ್ಕೂ ಅಧಿಕ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಿದೆ.