ಯುದ್ಧರಂಗದಲ್ಲಿ ಕೇರಳ ಯುವಕನ ಸಾವಿನ ಬಳಿಕ ರಶ್ಯ ಸೇನೆಯಲ್ಲಿನ ಭಾರತೀಯರ ಬಿಡುಗಡೆಗೆ ವಿದೇಶಾಂಗ ಸಚಿವಾಲಯ ಆಗ್ರಹ

Update: 2025-01-14 16:13 GMT

ಹೊಸದಿಲ್ಲಿ:  ರಶ್ಯದ ಸೇನೆಯಲ್ಲಿ ಬಲವಂತದಿಂದ ಸೇರ್ಪಡೆಗೊಂಡಿದ್ದ ಕೇರಳದ ಓರ್ವ ಯುವಕ ರಶ್ಯ-ಉಕ್ರೇನ್ ಯುದ್ಧದಲ್ಲಿ ಕೊಲ್ಲಲ್ಪಟ್ಟು,ಇನ್ನೋರ್ವ ಗಾಯಗೊಂಡಿರುವದನ್ನು ಭಾರತ ಸರಕಾರವು ಗಂಭೀರವಾಗಿ ಪರಿಗಣಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ದ ಪ್ರಕಾರ ರಶ್ಯ ಸೇನೆಯು ನೇಮಕ ಮಾಡಿಕೊಂಡಿರುವ ಭಾರತೀಯ ಪ್ರಜೆಗಳನ್ನು ಶೀಘ್ರ ಬಿಡುಗಡೆಗೊಳಿಸುವಂತೆ ತನ್ನ ಬೇಡಿಕೆಯನ್ನು ಭಾರತವು ಪುನರುಚ್ಚರಿಸಿದೆ.

‘ರಶ್ಯದ ಸೇನೆಯಲ್ಲಿ ನೇಮಕಗೊಂಡಿದ್ದ ಕೇರಳದ ಯುವಕನ ದುರದೃಷ್ಟಕರ ಸಾವಿನ ಬಗ್ಗೆ ನಮಗೆ ಗೊತ್ತಾಗಿದೆ. ಕೇರಳದ ಇನ್ನೋರ್ವ ಯುವಕ ಗಾಯಗೊಂಡು ಮಾಸ್ಕೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ’ ಎಂದು ಮಂಗಳವಾರ ಇಲ್ಲಿ ತಿಳಿಸಿದ ಎಂಇಎ ವಕ್ತಾರ ರಣಧೀರ ಜೈಸ್ವಾಲ್ ಅವರು, ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಇಬ್ಬರು ಭಾರತೀಯರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

‘ಮೃತದೇಹವನ್ನು ಶೀಘ್ರ ಭಾರತಕ್ಕೆ ತರಲು ನಾವು ರಶ್ಯದ ಅಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಗಾಯಾಳುವನ್ನು ಶೀಘ್ರ ಬಿಡುಗಡೆಗೊಳಿಸಿ ಭಾರತಕ್ಕೆ ಮರಳಿ ಕಳುಹಿಸುವಂತೆಯೂ ನಾವು ಕೇಳಿಕೊಂಡಿದ್ದೇವೆ. ಮಾಸ್ಕೋದಲ್ಲಿನ ರಶ್ಯದ ಅಧಿಕಾರಿಗಳು ಮತ್ತು ದಿಲ್ಲಿಯಲ್ಲಿರುವ ರಶ್ಯದ ರಾಯಭಾರಿ ಕಚೇರಿಗೆ ಈ ಬಗ್ಗೆ ಮಂಗಳವಾರ ಬಲವಾದ ಪ್ರಸ್ತಾವ ಸಲ್ಲಿಸಲಾಗಿದೆ ’ಎಂದು ಜೈಸ್ವಾಲ್ ತಿಳಿಸಿದರು.

‘ರಶ್ಯದ ಸೇನೆಯಲ್ಲಿರುವ ಉಳಿದ ಭಾರತೀಯರನ್ನು ಶೀಘ್ರ ಬಿಡುಗಡೆಗೊಳಿಸುವಂತೆಯೂ ನಾವು ಮತ್ತೊಮ್ಮೆ ಆಗ್ರಹಿಸಿದ್ದೇವೆ ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News