ರಾಜ್ಯದ ವಿ.ವಿ.ಗಳನ್ನು ಅಸ್ಥಿರಗೊಳಿಸಲು ಕೇಂದ್ರ ಸರಕಾರ, ಯುಜಿಸಿ ಯತ್ನ: ಪಿಣರಾಯಿ ವಿಜಯನ್

Update: 2025-01-14 16:48 GMT

Pinarayi Vijayan: PC : PTI

 ಕೊಚ್ಚಿ : ರಾಜ್ಯ ಸರಕಾರದ ಅಡಿಯಲ್ಲಿರುವ ವಿಶ್ವವಿದ್ಯಾನಿಲಯಗಳನ್ನು ಅಸ್ಥಿರಗೊಳಿಸಲು ಕೇಂದ್ರ ಹಾಗೂ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಪ್ರಯತ್ನಿಸುತ್ತಿವೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ಆರೋಪಿಸಿದ್ದಾರೆ.

‘‘ಮುಂದಿನ ತಲೆಮಾರಿನ ಉನ್ನತ ಶಿಕ್ಷಣ’’ದ ಕುರಿತ ಎರಡು ದಿನಗಳ ಅಂತರ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪಿಣರಾಯಿ ವಿಜಯನ್, ಯುಜಿಸಿಯ ಇತ್ತೀಚೆಗಿನ ನಿಯಮಾವಳಿಗಳು ರಾಜ್ಯ ವಿಶ್ವವಿದ್ಯಾನಿಲಯಗಳ ಸ್ವಾಯತ್ತಗೆ ಬೆದರಿಕೆ ಒಡ್ಡಿವೆ ಎಂದರು.

ರಾಜ್ಯದ ವಿಶ್ವವಿದ್ಯಾನಿಲಯಗಳು ಚುನಾಯಿತ ಶಾಸಕಾಂಗ ಸಭೆಗಳು ನಿರೂಪಿಸಿದ ಕಾನೂನುಗಳ ಪ್ರಕಾರ ಕಾರ್ಯ ನಿರ್ವಹಿಸುತ್ತವೆ. ಆದರೆ, ಕೇಂದ್ರ ಸರಕಾರ ಹಾಗೂ ಯುಜಿಸಿಯ ಇಂತಹ ನಿಯಮಗಳು ಈ ಸ್ವಾಯತ್ತತೆಯನ್ನು ನಾಶಪಡಿಸುತ್ತದೆ. ಕೇಂದ್ರ ಸರಕಾರ ಹಾಗೂ ಯುಜಿಸಿ ಇಂತಹ ಕೆಲಸಗಳಿಂದ ದೂರವಿರಬೇಕು. ವಿಶ್ವವಿದ್ಯಾನಿಲಯದ ಸ್ವಾಯತ್ತತೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಸರಕಾರದ ಹಕ್ಕುಗಳಿಗೆ ಗೌರವ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಅದ್ಯಾಪಕರ ನೇಮಕಾತಿಗಳು ಅಥವಾ ಇದೇ ರೀತಿಯ ವಿಷಯಗಳಲ್ಲಿ ಕನಿಷ್ಠ ಅರ್ಹತೆಯನ್ನು ವಿಧಿಸುವುದಕ್ಕೆ ರಾಜ್ಯ ಸರಕಾರಕ್ಕೆ ಯಾವುದೇ ವಿರೋಧ ಇಲ್ಲ. ಅಂತಹ ನಿಯಮಗಳಿಗೆ ರಾಜ್ಯ ಸರಕಾರ ಸಂಪೂರ್ಣ ಬದ್ಧವಾಗಿದೆ. ಆದರೆ, ಯುಜಿಸಿ ಈ ವಿಷಯದಲ್ಲಿ ತನ್ನ ಗಡಿ ದಾಟಿ ಹೆಜ್ಜೆ ಹಾಕುತ್ತಿರುವುದು ಸ್ವೀಕಾರಾರ್ಹವಲ್ಲ. ಹೆಚ್ಚಿನ ವಿಶ್ವವಿದ್ಯಾನಿಲಯಗಳಿಗೆ ರಾಜ್ಯ ಸಂಪನ್ಮೂಲಗಳಿಂದ ನಿಧಿ ಒದಗಿಸಲಾಗುತ್ತದೆ. ಕೇಂದ್ರ ಕನಿಷ್ಠ ನಿಧಿ ನೀಡುತ್ತದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News