2020ರ ದಿಲ್ಲಿ ಗಲಭೆ ಪ್ರಕರಣ: ಆರೋಪಿಯನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ತನಿಖಾಧಿಕಾರಿಗೆ ದಿಲ್ಲಿ ಕೋರ್ಟ್ ತರಾಟೆ
ಹೊಸದಿಲ್ಲಿ: 2020ರ ಈಶಾನ್ಯ ದಿಲ್ಲಿ ಗಲಭೆಯ ಸಂದರ್ಭದಲ್ಲಿ ಗಲಭೆ ಮತ್ತು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ದಿಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದ್ದು, ಮಾರ್ಪಾಡು ಮಾಡಿದ ವೀಡಿಯೊ ಆಧಾರದ ಮೇಲೆ ಆರೋಪಿಯನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ತನಿಖಾಧಿಕಾರಿಗೆ ತರಾಟೆಗೆ ತೆಗೆದುಕೊಂಡಿದೆ.
ಫೆಬ್ರವರಿ 24, 2020ರಂದು ಶಿವ ವಿಹಾರ್ ತಿರಾಹಾ ಬಳಿ ಆಟೋರಿಕ್ಷಾದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಹಲ್ಲೆಗೊಳಗಾದ ಶಾರುಖ್ ಎಂಬವರು ನೀಡಿದ ದೂರಿನ ವಿಚಾರಣೆಯ ವೇಳೆ ಆರೋಪಿ ಸಂದೀಪ್ ಭಾಟಿಯನ್ನು ಬಂಧಿಸಿದ ತನಿಖಾ ಅಧಿಕಾರಿಯ ನಡವಳಿಕೆಯ ಬಗ್ಗೆ ಪರಿಶೀಲಿಸುವಂತೆ ದಿಲ್ಲಿ ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಟಿ ವಿರುದ್ಧದ ಏಕೈಕ ಸಾಕ್ಷ್ಯವೆಂದರೆ ಎರಡು ವೀಡಿಯೊ ಕ್ಲಿಪ್ ಗಳು. ಅದರಲ್ಲಿ ಆರೋಪಿಯು ಒಂದು ಕ್ಲಿಪ್ ನಲ್ಲಿ ಕಾಣಿಸಲಿಲ್ಲ ಆದರೆ ಇನ್ನೊಂದು ಕ್ಲಿಪ್ ಅವರು ಬಲಿಪಶುವಿನ ಮೇಲೆ ಹಲ್ಲೆ ಮಾಡುವುದನ್ನು ತಡೆಯುವುದನ್ನು ತೋರಿಸಿದೆ. ತನಿಖಾಧಿಕಾರಿ ದೀರ್ಘಾವಧಿಯ ವೀಡಿಯೊವನ್ನು ಸಲ್ಲಿಸಿಲ್ಲ. ಬಲಿಪಶುವಿನ ಮೇಲೆ ಇತರರು ಹಲ್ಲೆ ಮಾಡುವುದನ್ನು ತಡೆಯುವ ಆರೋಪಿಯ ಪಾತ್ರವನ್ನು ತೋರಿಸುವ ಭಾಗವನ್ನು ಕತ್ತರಿಸಿರುವುದನ್ನು ನ್ಯಾಯಾಲಯ ಗಮನಿಸಿದೆ. ಪೊಲೀಸರು ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ಮಾಡುವ ಮತ್ತು ಸಂಪೂರ್ಣ ತನಿಖೆಯ ಆಧಾರದ ಮೇಲೆ ತನ್ನ ವರದಿಯನ್ನು ಸಲ್ಲಿಸುವ ಕರ್ತವ್ಯದಿಂದ ಅಕ್ಷರಶಃ ನುಣುಚಿಕೊಂಡಿದ್ದಾರೆ ಎಂದು ನ್ಯಾಯಾಧೀಶರು ತನಿಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.