ಜಮ್ಮು-ಕಾಶ್ಮೀರ: ನಿಗೂಢ ಕಾಯಿಲೆ 10 ಮಕ್ಕಳ ಸಹಿತ 13 ಮಂದಿ ಮೃತ್ಯು
ಶ್ರೀನಗರ : ಜಮ್ಮು ಹಾಗೂ ಕಾಶ್ಮೀರದ ಗಡಿ ಜಿಲ್ಲೆಯಾದ ರಾಜೌರಿಯ ಬಡಹಾಲ್ ಗ್ರಾಮದಲ್ಲಿ ನಿಗೂಢ ಕಾಯಿಲೆಯಿಂದ 10 ಮಕ್ಕಳು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ.
ಈ ನಿಗೂಢ ಕಾಯಿಲೆಯ ಕಾರಣ ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆ ಗ್ರಾಮದಲ್ಲಿ ತೀವ್ರವಾಗಿ ಸಂಪರ್ಕ ಪತ್ತೆ ಮಾಡುತ್ತಿದೆ ಹಾಗೂ ಮಾದರಿ ಸಂಗ್ರಹಿಸುತ್ತಿದೆ.
ಈ ನಿಗೂಢ ಕಾಯಿಲೆಗೆ ಸೋಮವಾರ ಸಂಜೆ ಮುಹಮ್ಮದ್ ಯೂಸುಫ್ ಎಂಬವರು ಮೃತಪಟ್ಟಿದ್ದರು. ಸೋಮವಾರ ಬೆಳಗ್ಗೆ ಮುಹಮ್ಮದ್ ಅಸ್ಲಾಂ ಎಂಬವರ ಪುತ್ರ 10 ವರ್ಷದ ಮುಹಮ್ಮದ್ ಮರೂಫ್ ಸಾವನ್ನಪ್ಪಿದ್ದ. ಅಸ್ಲಾಂ ಅವರು ರವಿವಾರ ತನ್ನ ಇಬ್ಬರು ಮಕ್ಕಳಾದ 14 ವರ್ಷದ ಝಹೂರ್ ಅಹ್ಮದ್ ಹಾಗೂ 5 ವರ್ಷದ ನಬೀನಾ ಅಕ್ತರ್ ಳನ್ನು ಕೂಡ ಕಳೆದುಕೊಂಡಿದ್ದರು.
ಈ ನಿಗೂಢ ಕಾಯಿಲೆಗೆ 2024 ಡಿಸೆಂಬರ್ 7ರಂದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದರು. 2024 ಡಿಸೆಂಬರ್ 12ರಂದು ಮೂವರು ಮಕ್ಕಳು ಸಾವನ್ನಪ್ಪಿದ್ದರು. ಜ್ವರ, ಬೆವರುವಿಕೆ, ವಾಂತಿ, ನಿರ್ಜಲೀಕರಣ ಹಾಗೂ ಆಗಾಗ ಪ್ರಜ್ಞೆ ಕಳೆದುಕೊಳ್ಳುವುದು ಈ ರೋಗದ ಮುಖ್ಯ ಲಕ್ಷಣಗಳಾಗಿವೆ.
ಸಂಭಾವ್ಯ ಆರೋಗ್ಯದ ಅಪಾಯವನ್ನು ಗುರುತಿಸಲು ಹಾಗೂ ಪರಿಹರಿಸಲು ಗ್ರಾಮದಲ್ಲಿ ತ್ವರಿತವಾಗಿ ಪರೀಕ್ಷೆ ಹಾಗೂ ಕಣ್ಗಾವಲು ನಡೆಯುತ್ತಿದೆ ಎಂದು ರಾಜೌರಿಯ ಮುಖ್ಯ ವೈದ್ಯಾಧಿಕಾರಿ ಡಾ. ಮನೋಹರ್ ಲಾಲ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಇದುವರೆಗೆ ಮೂರು ಕುಟುಂಬಗಳಿಗೆ ಈ ನಿಗೂಢ ಕಾಯಿಲೆ ಸೀಮಿತವಾಗಿದೆ. ರೋಗ ಪೀಡಿತ ವ್ಯಕ್ತಿಗಳು ಅನಾರೋಗ್ಯಕ್ಕೆ ತುತ್ತಾಗುವ ಮುನ್ನ ಕೆಲವು ಆಹಾರವನ್ನು ಸೇವಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಗ್ರಾಮದಲ್ಲಿ 5700 ಜನರಿದ್ದಾರೆ. ನಾವು 12 ಸಾವಿರಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಿದ್ದೇವೆ. ಮತ್ತೆ ಮತ್ತೆ ಪರೀಕ್ಷೆ ನಡೆಸುತ್ತಿದ್ದೇವೆ. ಕಣ್ಗಾವಲು ತಳ ಮಟ್ಟದಲ್ಲಿ ನಡೆಯುತ್ತಿದೆ ಎಂದು ಮನೋಹರ್ ತಿಳಿಸಿದ್ದಾರೆ.