ಮಹಾರಾಷ್ಟ್ರದ ಬೀಡ್‌ನಲ್ಲಿ ನಿಷೇಧಾಜ್ಞೆ ಜಾರಿ
ಬೀಡ್: ಮಸಾಜೋಗ್ ಗ್ರಾಮದ ಸರಪಂಚ ಸಂತೋಷ ದೇಶಮುಖ್ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆಗಳು ಹಾಗೂ ಮರಾಠಾ ಮತ್ತು ಒಬಿಸಿ ಸಮುದಾಯಗಳಿಂದ ಮೀಸಲಾತಿಗೆ ಆಗ್ರಹಿಸಿ ಆಂದೋಲನಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬೀಡ್‌ನಲ್ಲಿ ಜ.28ರವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಬೀಡ್ ಜಿಲ್ಲೆಯ ವಿಂಡ್‌ಮಿಲ್ ಕಂಪನಿಯೊಂದರಿಂದ ಎರಡು ಕೋಟಿ ರೂ. ಹಫ್ತಾ ವಸೂಲಿಗೆ ಕೆಲವು ವ್ಯಕ್ತಿಗಳ ಪ್ರಯತ್ನಗಳನ್ನು ವಿರೋಧಿಸಿದ್ದ ದೇಶಮುಖ್ ರನ್ನು ಡಿ.9ರಂದು ಅಪಹರಿಸಿ ಬಳಿಕ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಏಳು ಜನರನ್ನು ಪೋಲಿಸರು ಬಂಧಿಸಿದ್ದು,ಇನ್ನೋರ್ವ ಶಂಕಿತ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬಂಧಿತರ ಪೈಕಿ ಮಹಾರಾಷ್ಟ್ರದ ಸಚಿವ ಧನಂಜಯ ಮುಂಡೆ ಅವರ ಆಪ್ತ ವಾಲ್ಮೀಕ ಕರಾಡ್ ಸೇರಿದ್ದಾನೆ.
ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮತ್ತು ಪ್ರತಿಪಕ್ಷ ಮಹಾ ವಿಕಾಸ ಅಘಾಡಿ ನಾಯಕರು ದೇಶಮುಖ್ ಗೆ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ನೆರೆಯ ಜಾಲ್ನಾ ಜಿಲ್ಲೆಯಲ್ಲಿ ಸಾಮಾಜಿಕ ಹೋರಾಟಗಾರ ಮನೋಜ ಜಾರಂಗೆ-ಪಾಟೀಲ್ ಅವರು ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಒಬಿಸಿ ವರ್ಗದಡಿ ಮರಾಠಾ ಸಮುದಾಯಕ್ಕೆ ಮೀಸಲಾತಿಗಾಗಿ ಒತ್ತಡ ಹೇರಲು ಜ.25ರಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರವನ್ನು ಆರಂಭಿಸುವುದಾಗಿ ಪ್ರಕಟಿಸಿದ್ದಾರೆ. ಇದು ತನ್ನ ಬೇಡಿಕೆಗಳಿಗಾಗಿ ಒತ್ತಡ ಹೇರಲು ಅವರ ಮುಷ್ಕರವಾಗಲಿದೆ.