ತಿರುಪತಿ ದೇವಸ್ಥಾನಕ್ಕೆ ಕಾಣಿಕೆಯಾಗಿ ಬಂದಿದ್ದ ಚಿನ್ನವನ್ನು ಕದ್ದಿದ್ದ ಗುತ್ತಿಗೆ ಉದ್ಯೋಗಿಯ ಸೆರೆ

Update: 2025-01-14 16:17 GMT

PC : etvbharat.com

ತಿರುಪತಿ : ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ)ದಲ್ಲಿ ಅಗ್ರಗೋಸ್‌ನಿಂದ ನೇಮಕಗೊಂಡಿದ್ದ ಗುತ್ತಿಗೆ ಉದ್ಯೋಗಿಯನ್ನು ಕಳೆದೊಂದು ವರ್ಷದಲ್ಲಿ ಶ್ರೀವಾರಿ ಪರಕಾಮಣಿಯ ಭಂಡಾರದಿಂದ ಚಿನ್ನವನ್ನು ಕಳ್ಳತನ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಹೊರಗುತ್ತಿಗೆ ಏಜೆನ್ಸಿಯಾಗಿರುವ ಆಗ್ರಗೋಸ್ ತಿರುಮಲ ದೇವಸ್ಥಾನದ ಕಾಣಿಕೆ ಡಬ್ಬಿ ‘ಶ್ರೀವಾರಿ ಹುಂಡಿ’ಗೆ ಅರ್ಪಿಸಲಾಗುವ ಕಾಣಿಕೆಗಳ ವಿಂಗಡಣೆ ಮತ್ತು ಎಣಿಕೆಗಾಗಿ ಟಿಟಿಡಿಗೆ ಸಿಬ್ಬಂದಿಗಳನ್ನು ಪೂರೈಸುತ್ತದೆ.

ವೀರಿಶೆಟ್ಟಿ ಪೆಂಚಾಲಯ್ಯನನ್ನು ಕಾಣಿಕೆಗಳನ್ನು ವಿಂಗಡಿಸುವ ಮತ್ತು ಎಣಿಕೆ ಮಾಡುವ ಕೆಲಸಕ್ಕಾಗಿ ಕಳೆದ ಎರಡು ವರ್ಷಗಳಿಂದ ನೇಮಿಸಲಾಗಿತ್ತು. ಆತ ತನ್ನ ಸ್ಥಾನವನ್ನು ದುರುಪಯೋಗಿಸಿಕೊಂಡು ಪರಕಾಮಣಿಯ ಭಂಡಾರದಲ್ಲಿ ಇರಿಸಲಾದ ಚಿನ್ನದ ಕಾಣಿಕೆಗಳನ್ನು ಕಳ್ಳತನ ಮಾಡುತ್ತಿದ್ದುದು ಬೆಳಕಿಗೆ ಬಂದ ಬಳಿಕ ಆತನನ್ನು ಬಂಧಿಸಲಾಗಿದೆ.

ಪರಕಾಮಣಿ ಭಕ್ತರು ‘ಶ್ರೀವಾರಿ ಹುಂಡಿ’ಗೆ ಅರ್ಪಿಸುವ ಕಾಣಿಕೆಗಳನ್ನು ವಿಂಗಡಿಸಿ, ಎಣಿಕೆ ಮಾಡಿ ಅವುಗಳ ಲೆಕ್ಕವನ್ನು ನಮೂದಿಸುವ ದೈನಂದಿನ ಚಟುವಟಿಕೆಯಾಗಿದೆ. ಕಾಣಿಕೆಗಳು ನಾಣ್ಯಗಳು ಮತ್ತು ನೋಟುಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳಂತಹ ಅಮೂಲ್ಯ ವಸ್ತುಗಳನ್ನು ಒಳಗೊಂಡಿರುತ್ತವೆ.

ಜ.11ರಂದು ಅಪರಾಹ್ನ ಭಂಡಾರದಿಂದ 100 ಗ್ರಾಮ್ ತೂಕದ ಚಿನ್ನದ ಬಿಸ್ಕಿಟ್‌ಗಳನ್ನು ಕದಿಯುತ್ತಿದ್ದಾಗ ಪೆಂಚಾಲಯ್ಯ ಸಿಕ್ಕಿ ಬಿದ್ದಿದ್ದ. ಆತ ಟ್ರಾಲಿಯೊಂದರಲ್ಲಿ ಕದ್ದ ಬಿಸ್ಕಿಟ್‌ಗಳನ್ನು ಪರಕಾಮಣಿ ಕಟ್ಟಡದಿಂದ ಹೊರಕ್ಕೆ ಸಾಗಿಸುತ್ತಿದ್ದಾಗ ಜಾಗ್ರತ ಸಿಬ್ಬಂದಿಗಳು ಅದರಲ್ಲಿ ಬಚ್ಚಿಟ್ಟಿದ್ದ ಚಿನ್ನವನ್ನು ಪತ್ತೆ ಹಚ್ಚಿದ್ದರು. ಸಿಸಿಟಿವಿ ದೃಶ್ಯಾವಳಿಗಳು ಕಳ್ಳತನವನ್ನು ದೃಢ ಪಡಿಸಿದ್ದು, ಸ್ಥಳದಿಂದ ಪರಾರಿಯಾಗಿದ್ದ ಪೆಂಚಾಲಯ್ಯನನ್ನು ನಂತರ ಪೋಲಿಸರು ಬಂಧಿಸಿದ್ದಾರೆ.

ವಿಚಾರಣೆಯ ಬಳಿಕ ಪೆಂಚಾಲಯ್ಯನಿಂದ 555 ಗ್ರಾಮ್ ಚಿನ್ನ ಮತ್ತು 157 ಗ್ರಾಮ್ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದ್ದು,ಇವುಗಳ ಮೌಲ್ಯ 46 ಲಕ್ಷ ರೂ.ಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News