ಮರಾಠಿ ಸಾಹಿತ್ಯ ಉತ್ಸವಕ್ಕೆ ಪ್ರಧಾನಿ ಮೋದಿಗೆ ಶರದ್ ಪವಾರ್ ಆಹ್ವಾನ!

Update: 2025-01-15 02:20 GMT

PC: x.com/PMOIndia

ಹೊಸದಿಲ್ಲಿ: ಪ್ರಮುಖ ಮರಾಠಿ ಸಾಹಿತ್ಯ ಉತ್ಸವದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವ ಮೂಲಕ ಎನ್‌ಸಿಪಿ-ಎಸ್‌ಪಿ ಮುಖಂಡ ಶರದ್ ಪವಾರ್ ಅಚ್ಚರಿ ಮೂಡಿಸಿದ್ದಾರೆ.

ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಕೇಂದ್ರದ ಕ್ರಮಕ್ಕೆ ಕೃತಜ್ಞತಾಪೂರ್ವಕವಾಗಿ ಮೋದಿಯವರನ್ನು ಸಾಹಿತ್ಯ ಉತ್ಸವಕ್ಕೆ ಆಹ್ವಾನಿಸಲಾಗಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಳಿಕ ಹಲವು ಸವಾಲುಗಳನ್ನು ಎದುರಿಸುತ್ತಿರುವ ಪವಾರ್ ಅವರ ರಾಜಕೀಯ ಕಾರ್ಯತಂತ್ರದ ಭಾಗ ಇದಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಪವಾರ್ ನೇತೃತ್ವದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಆಯೋಜನಾ ಸಮಿತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿದೆ. ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಲ ಆಶ್ರಯದಲ್ಲಿ ಸಾಹಿತ್ಯ ಉತ್ಸವ ನಡೆಯುತ್ತಿದೆ. ಇತ್ತೀಚೆಗೆ ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಸಮ್ಮೇಳನ ಉದ್ಘಾಟಿಸುವುದು ಹೆಚ್ಚು ಅರ್ಥಪೂರ್ಣ ಎಂದು ಆಯೋಜಕರು ಅಭಿಪ್ರಾಯಪಟ್ಟಿದ್ದಾರೆ.

ಮೊಟ್ಟಮೊದಲ ಬಾರಿಗೆ ಫೆಬ್ರುವರಿ 21 ರಿಂದ 23ರವರೆಗೆ ನವದೆಹಲಿಯಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು 37ನೇ ಸಮ್ಮೇಳನವನ್ನು ಉದ್ಘಾಟಿಸಿದ್ದರು ಎನ್ನುವುದನ್ನು ಪವಾರ್, ಪ್ರಧಾನಿಗೆ ವಿವರಿಸಿದರು.

ಸಮ್ಮೇಳನದ ಐತಿಹಾಸಿಕ ಮಹತ್ವವನ್ನು ವಿವರಿಸಿದ ಪವಾರ್, ಮೊಟ್ಟಮೊದಲ ಸಮ್ಮೇಳನವನ್ನು 1878ರಲ್ಲಿ ನ್ಯಾಯಮೂರ್ತಿ ಮಹಾದೇವ ಗೋವಿಂದ ರಾನಡೆ ಪುಣೆಯಲ್ಲಿ ಉದ್ಘಾಟಿಸಿದ್ದರು ಎಂದು ಇತಿಹಾಸ ಮೆಲುಕು ಹಾಕಿದರು. ಲೋಕಮಾನ್ಯ ತಿಲಕ್, ನಾಮದಾರ್ ಗೋಖಲೆ, ವಿ.ಡಿ.ಸಾವರ್ಕರ್ ಮತ್ತು ಕಾಕಾಸಾಹೇಬ್ ಗಾಡ್ಗಿಳ್ ಮುಂತಾದವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು ಎಂದು ಪವಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News