ಹರ್ಯಾಣ ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಸೇರಿದಂತೆ ಇಬ್ಬರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲು
ಶಿಮ್ಲಾ: ಕಸೌಲಿಯ ಹೋಟೆಲ್ ವೊಂದರಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹಿಮಾಚಲ ಪ್ರದೇಶದ ಮಹಿಳೆಯೋರ್ವರು ನೀಡಿದ ದೂರಿನ ಮೇರೆಗೆ ಹರ್ಯಾಣ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಮತ್ತು ಗಾಯಕ ಜೈ ಭಗವಾನ್ ಅಲಿಯಾಸ್ ರಾಕಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಮೋಹನ್ ಲಾಲ್ ಬಡೋಲಿ ಮತ್ತು ಗಾಯಕ ಜೈ ಭಗವಾನ್ ತನ್ನ ಮೇಲೆ ಅತ್ಯಾಚಾರ ಎಸಗಿರುವುದಲ್ಲದೆ, ಕೃತ್ಯವನ್ನು ವೀಡಿಯೊ ಚಿತ್ರೀಕರಿಸಿದ್ದು, ಘಟನೆ ಬಗ್ಗೆ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎಫ್ ಐಆರ್ ನಲ್ಲಿ ಏನಿದೆ?
ಡಿ.13ರಂದು ಈ ಕುರಿತು ಹಿಮಾಚಲದ ಸೋಲನ್ ಜಿಲ್ಲೆಯ ಕಸೌಲಿಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಎಫ್ ಐಆರ್ ಪ್ರತಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜುಲೈ 3, 2023ರಂದು ನಾನು ಸ್ನೇಹಿತನೊಂದಿಗೆ ಕಸೌಲಿಯ ಹೋಟೆಲ್ ನಲ್ಲಿ ತಂಗಿದ್ದೆ, ಈ ವೇಳೆ ಬಡೋಲಿ ತನ್ನನ್ನು ರಾಜಕಾರಣಿ ಎಂದು ಮತ್ತು ರಾಕಿ ತನ್ನನ್ನು ತಾನು ಗಾಯಕ ಎಂದು ಪರಿಚಯಿಸಿಕೊಂಡಿದ್ದ. ನಂತರ ನನ್ನನ್ನು ಮತ್ತು ಗೆಳೆಯನನ್ನು ಸರ್ಕಾರಿ ಕೆಲಸ ಕೊಡಿಸುವ ಮತ್ತು ಸಂಗೀತ ಕ್ಷೇತ್ರದಲ್ಲಿ ಅವಕಾಶ ಕೊಡುವ ನೆಪದಲ್ಲಿ ಅವರ ಕೊಠಡಿಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದು, ಇದಕ್ಕೆ ನಿರಾಕರಿಸಿದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ತಮ್ಮ ಕೃತ್ಯದ ಬಗ್ಗೆ ಅವರು ವೀಡಿಯೊವನ್ನು ಸೆರೆ ಹಿಡಿದಿದ್ದು, ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ ಎರಡು ತಿಂಗಳ ಹಿಂದೆ, ಪಂಚಕುಲದಲ್ಲಿರುವ ರಾಕಿಯ ಮನೆಗೆ ಕರೆಸಿಕೊಂಡು ಆರೋಪಿಗಳು ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯ ದೂರಿನ ಆಧಾರದ ಮೇಲೆ ಬಡೋಲಿ ಮತ್ತು ರಾಕಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಡಿ ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.