ದಿಲ್ಲಿ ಅಬಕಾರಿ ನೀತಿ ಹಗರಣ : ಕೇಜ್ರಿವಾಲ್ ವಿರುದ್ಧ ಪ್ರಾಸಿಕ್ಯೂಷನ್ ಗೆ ಒಪ್ಪಿಗೆ ನೀಡಿದ ಕೇಂದ್ರ ಗೃಹ ಸಚಿವಾಲಯ
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಗೃಹ ಸಚಿವಾಲಯ ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಗೆ ನೀಡಿದೆ.
ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಒಪ್ಪಿಗೆ ನೀಡಿದ ಬೆನ್ನಲ್ಲೇ ಗೃಹ ಸಚಿವಾಲಯದ ಈ ನಿರ್ಧಾರವು ಹೊರ ಬಿದ್ದಿದೆ.
ಸಾರ್ವಜನಿಕ ಸೇವಕರನ್ನು ವಿಚಾರಣೆಗೆ ಒಳಪಡಿಸುವ ಮೊದಲು ಈಡಿ ಪೂರ್ವಾನುಮತಿ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ನವೆಂಬರ್ ನಲ್ಲಿ ನೀಡಿದ ಆದೇಶದಲ್ಲಿ ಹೇಳಿತ್ತು. ಇದರ ಬೆನ್ನಲ್ಲೇ ಡಿ.5ರಂದು ಜಾರಿ ನಿರ್ದೇಶನಾಲಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದು, ಕೇಜ್ರಿವಾಲ್ ಹಗರಣದ ಪ್ರಮುಖ ಸಂಚುಕೋರ ಆಗಿರುವುದರಿಂದ ವಿಚಾರಣೆಗೆ ಅನುಮೋದನೆ ನೀಡಬೇಕು ಎಂದು ಕೇಳಿಕೊಂಡಿದ್ದರು. ಇದಕ್ಕೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಒಪ್ಪಿಗೆ ನೀಡಿದ್ದರು. ಇದೀಗ ಕೇಂದ್ರ ಗೃಹ ಸಚಿವಾಲಯವು ಕೇಜ್ರಿವಾಲ್ ಮತ್ತು ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಿದೆ. ದಿಲ್ಲಿ ವಿಧಾನಸಭಾ ಚುನಾವಣೆ ಮಧ್ಯೆ ನಡೆದಿರುವ ಈ ಬೆಳವಣಿಗೆಯಿಂದ ಕೇಜ್ರಿವಾಲ್ ಅವರಿಗೆ ದೊಡ್ಡ ಸಂಕಷ್ಟ ಎದುರಾದಂತಾಗಿದೆ.