ಸಿಎಂ ಧಾಮಿ ಆದೇಶದ ಬಳಿಕ 200 ಅನಧಿಕೃತ ಮದರಸಾಗಳನ್ನು ಪಟ್ಟಿಮಾಡಿದ ಉತ್ತರಾಖಂಡ ಸರ್ಕಾರ
ಡೆಹ್ರಾಡೂನ್: ಉತ್ತರಾಖಂಡದಲ್ಲಿ 200ಕ್ಕೂ ಅಧಿಕ ಮದರಸಗಳು ನೋಂದಣಿ ಇಲ್ಲದೇ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ ಎಂದು ಉತ್ತರಾಖಂಡ ಸರ್ಕಾರ ಪ್ರಕಟಿಸಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರ ಸೂಚನೆಯಂತೆ ತನಿಖೆ ನಡೆಯುತ್ತಿದ್ದು, ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಮದರಸಗಳನ್ನು ನಿಭಾಯಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಮದರಸಗಳು ನೋಂದಣಿ ಸ್ಥಿತಿಗತಿ, ಇವುಗಳ ಹಣಕಾಸು ನೆರವು ಮತ್ತು ಇತರ ರಾಜ್ಯಗಳ ವಿದ್ಯಾರ್ಥಿಗಳ ವಿವರಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದೆ.
ಉಧಾಂ ಸಿಂಗ್ ನಗರವೊಂದರಲ್ಲೇ 129 ನೋಂದಣಿಯಾಗದ ಮದರಸಗಳನ್ನು ಗುರುತಿಸಲಾಗಿದೆ. ಡೆಹ್ರಾಡೂನ್ ನಲ್ಲಿ 57 ಮತ್ತು ನೈನಿತಾಲ್ ನಲ್ಲಿ 26 ಮದರಸಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾಮಟ್ಟದ ತನಿಖಾ ಸಮಿತಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿದ್ದು, ಈ ಸಮಿತಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತದೆ. ಒಂದು ತಿಂಗಳ ಒಳಗಾಗಿ ರಾಜ್ಯಮಟ್ಟದ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಮೂಲಗಳು ಹೇಳಿವೆ.
"ಬರೇಲ್ವಿ ಹಾಗೂ ದಯೂಬಂದಿ ಎಂಬ ಎರಡು ವಿಭಾಗದ ನೋಂದಾಯಿಸಲ್ಪಡದ ಮದರಸಗಳನ್ನು ನಾವು ಪತ್ತೆ ಮಾಡುತ್ತಿದ್ದೇವೆ. ಈ ಮದರಸಾಗಳು ಕಾನೂನಿಗೆ ವಿರುದ್ಧವಾಗಿ ನೋಂದಣಿಯಿಲ್ಲದೇ ಕಾರ್ಯ ನಿರ್ವಹಿಸುತ್ತಿವೆ" ಎಂದು ಉಧಾಂ ಸಿಂಗ್ ನಗರ ಎಸ್ ಎಸ್ಪಿ ಮಣಿಕಾಂತ್ ಮಿಶ್ರಾ ಹೇಳಿದ್ದಾರೆ.
"ಮುಂದಿನ ಹಂತದಲ್ಲಿ ಇವುಗಳ ಹಣಕಾಸು ಮೂಲಗಳನ್ನು ಪತ್ತೆ ಮಾಡಲಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇತರ ರಾಜ್ಯಗಳ ವಿದ್ಯಾರ್ಥಿಗಳ ಬಗೆಗೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅನುಮಾನಾಸ್ಪದ ಪ್ರದೇಶಗಳಲ್ಲಿ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ಸದ್ಯವೇ ವರದಿ ಅಂತಿಮಗೊಳಿಸಲಾಗುವುದು" ಎಂದು ಎಸ್ ಎಸ್ಪಿ ವಿವರಿಸಿದ್ದಾರೆ.