ಮಧ್ಯಪ್ರದೇಶ | ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಮಹಿಳೆಯ ಅತ್ಯಾಚಾರ: ಬಿಜೆಪಿ ಮುಖಂಡನ ಬಂಧನ, ಪಕ್ಷದಿಂದ ಉಚ್ಚಾಟನೆ
ಭೋಪಾಲ್ : ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಬಿಜೆಪಿಯ ಮಹಿಳಾ ನಾಯಕಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಹಣ ಸುಲಿಗೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಬಿಜೆಪಿ ಮುಖಂಡನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಆತನನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಸಿಧಿ ಜಿಲ್ಲೆಯ ಬಿಜೆಪಿ ಮುಖಂಡ ಅಜಿತ್ ಪಾಲ್ ಸಿಂಗ್ ಚೌಹಾಣ್ ಈ ಕೃತ್ಯವನ್ನು ಎಸಗಿದ ಆರೋಪಿಯಾಗಿದ್ದಾನೆ. ಅಜಿತ್ ಪಾಲ್ ಬಿಜೆಪಿಯ ಮಹಿಳಾ ನಾಯಕಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಕೃತ್ಯದ ವೀಡಿಯೊ ಚಿತ್ರೀಕರಿಸಿದ್ದಾನೆ. ಇದಾದ ಬಳಿಕ ಸಂತ್ರಸ್ತೆಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ. ಅಜಿತ್ ಪಾಲ್ ಸಿಂಗ್ ಚೌಹಾಣ್ ಮಹಿಳೆಯ ಪತಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ ಆಕೆಯ ಮಾವನಿಗೆ ಅಶ್ಲೀಲ ವೀಡಿಯೊವನ್ನು ತೋರಿಸಿ ಹಣ ನೀಡುವಂತೆ ಬಲವಂತ ಮಾಡಿದ್ದಾನೆ.
ಈ ಕುರಿತು ಸಂತ್ರಸ್ತ ಮಹಿಳೆ ಜನವರಿ 13ರಂದು ಚೌಹಾಣ್ ವಿರುದ್ಧ ಅತ್ಯಾಚಾರ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಸಿಧಿ ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವ್ ಕುಮಾರ್ ಸಿಂಗ್ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಜಿತ್ ಪಾಲ್ ಸಿಂಗ್ ಚೌಹಾಣ್ ಅವರನ್ನು ಉಚ್ಛಾಟಿಸಿದ್ದಾರೆ.