1971ರ ಶರಣಾಗತಿ ಚಿತ್ರದ ಬದಲು ಮಹಾಭಾರತ ಪ್ರೇರಿತ ಕಲಾಕೃತಿ ಅಳವಡಿಕೆ ಕ್ರಮವನ್ನು ಸಮರ್ಥಿಸಿಕೊಂಡ ಸೇನಾ ಮುಖ್ಯಸ್ಥ
ಹೊಸದಿಲ್ಲಿ : ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ದಿಲ್ಲಿಯ ರೈಸಿನಾ ಹಿಲ್ ನಲ್ಲಿರುವ ತಮ್ಮ ಕಚೇರಿಯಿಂದ 1971ರ ಯುದ್ಧದಲ್ಲಿ ಭಾರತಕ್ಕೆ ಪಾಕಿಸ್ತಾನ ಶರಣಾಗತಿಯ ಸಾಂಪ್ರದಾಯಿಕ ಚಿತ್ರವನ್ನು ತೆಗೆದು ‘ಕರ್ಮ ಕ್ಷೇತ್ರ ಎಂಬ ಹೊಸ ವರ್ಣಚಿತ್ರವನ್ನು ಅಳವಡಿಸಿದ್ದಾರೆ. ಈ ಬಗ್ಗೆ ವಿವಾದ ವ್ಯಕ್ತವಾಗುತ್ತಿದ್ದಂತೆ ಜನರಲ್ ಉಪೇಂದ್ರ ದ್ವಿವೇದಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
1971ರ ಯುದ್ಧದಲ್ಲಿ ಪಾಕಿಸ್ತಾನದ ಶರಣಾಗತಿಯ ಸಾಂಪ್ರದಾಯಿಕ ಚಿತ್ರವು ಸೇನಾ ಮುಖ್ಯಸ್ಥರ ಕಚೇರಿಯ ಗೋಡೆಯ ಮೇಲೆ ಇರಿಸಲಾಗಿತ್ತು. ಡಿಸೆಂಬರ್ ನಲ್ಲಿ ಅದನ್ನು ತೆಗೆದು ಮಾಣೆಕ್ ಶಾ ಸೆಂಟರ್ ನಲ್ಲಿ ಇರಿಸಲಾಗಿದೆ. ಅದರ ಬದಲಿಗೆ ಹೊಸ ಕಲಾಕೃತಿಯನ್ನು ಸ್ಥಳದಲ್ಲಿ ಇರಿಸಲಾಗಿದೆ.
ಭಾರತೀಯ ಸೇನಾ ಮುಖ್ಯಸ್ಥರ ಕಚೇರಿಯಲ್ಲಿದ್ದ 1971ರ ಯುದ್ಧದಲ್ಲಿ ಪಾಕಿಸ್ತಾನದ ಸೇನೆಯು ಶರಣಾಗತಿ ಪತ್ರಕ್ಕೆ ಸಹಿ ಹಾಕುತ್ತಿರುವ ಮಹತ್ವದ ಚಿತ್ರವನ್ನು ತೆಗೆದು ಅದರ ಬದಲಿಗೆ ಟ್ಯಾಂಕ್ ಗಳು, ಹೆಲಿಕಾಪ್ಟರ್ ಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಯೋಧರೊಂದಿಗೆ ಮಹಾಭಾರತದ ಚಿತ್ರಣ ಮತ್ತು ಪ್ರಾಚೀನ ದಾರ್ಶನಿಕ ಚಾಣಕ್ಯನ ಚಿತ್ರಣವನ್ನೊಳಗೊಂಡ ವರ್ಣಚಿತ್ರವನ್ನು ಅಳವಡಿಸಲಾಗಿದೆ. ಸೇನಾ ಮುಖ್ಯಸ್ಥರ ಕಚೇರಿಯಲ್ಲಿನ ಚಿತ್ರವನ್ನು ಬದಲಿಸುವ ನಿರ್ಧಾರವನ್ನು ನಿವೃತ್ತ ಯೋಧರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೀವು ಭಾರತದ ಸುವರ್ಣ ಇತಿಹಾಸವನ್ನು ನೋಡಿದರೆ, ಇದು ಮೂರು ಅಧ್ಯಾಯಗಳನ್ನು ಹೊಂದಿದೆ. ಒಂದು ಬ್ರಿಟಿಷ್ ಯುಗ, ಎರಡನೆಯದು ಮೊಘಲ್ ಯುಗ ಮತ್ತೊಂದು ಅದಕ್ಕಿಂತ ಹಿಂದಿನ ಯುಗ. ನೀವು ಅದನ್ನು ಮತ್ತು ಸೇನೆಯ ದೃಷ್ಟಿಕೋನವನ್ನು ಸಂಪರ್ಕಿಸಲು ಬಯಸಿದರೆ ಈ ಸಂಕೇತವು ಮುಖ್ಯವಾಗುತ್ತದೆ. ಹೊಸ ವರ್ಣಚಿತ್ರವನ್ನು 28 ಮದ್ರಾಸ್ ರೆಜಿಮೆಂಟ್ ನ ಲೆಫ್ಟಿನೆಂಟ್ ಕರ್ನಲ್ ಥಾಮಸ್ ಜಾಕೋಬ್ ರಚಿಸಿದ್ದಾರೆ. ಪ್ರಸ್ತುತ ವಾಸ್ತವಗಳನ್ನು ಪರಿಗಣಿಸಿ ಹೊಸ ವರ್ಣಚಿತ್ರಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಹೊಸ ವರ್ಣಚಿತ್ರದ ಬಗ್ಗೆ ಟೀಕೆಗಳನ್ನು ಉದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ, ಪಂಗೋಂಗ್ ತ್ಸೋ ಸರೋವರದ ಮಧ್ಯದಲ್ಲಿ ಅರೆ ವಸ್ತ್ರಧಾರಿ ಬ್ರಾಹ್ಮಣ ನಿಂತಿದ್ದಾನೆ ಎಂದು ಹೇಳಲಾಗುತ್ತಿದೆ. ಭಾರತೀಯರಿಗೆ ಚಾಣಕ್ಯನ ಬಗ್ಗೆ ಗೊತ್ತಿಲ್ಲದಿದ್ದರೆ, ಅವರ ನಾಗರಿಕತೆಯ ವಿಧಾನವನ್ನು ತಿಳಿಯಬೇಕಿದೆ, ಹೊಸ ವರ್ಣಚಿತ್ರವು ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಸಂಕೇತಿಸುತ್ತದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.