"ನ್ಯಾಯಾಲಯದ ಜೊತೆ ನಾಟಕವಾಡಬೇಡಿ": ಜಾಮೀನು ಸಿಕ್ಕರೂ ಜೈಲಿನಿಂದ ಹೊರ ಬರಲು ನಿರಾಕರಿಸಿದ ಬಾಬಿ ಚೆಮ್ಮನೂರ್ ಗೆ ಹೈಕೋರ್ಟ್ ತರಾಟೆ
ಕೊಚ್ಚಿ: ಮಲಯಾಳಂ ನಟಿ ಹನಿ ರೋಸ್ ನೀಡಿದ್ದ ಲೈಂಗಿಕ ಕಿರುಕುಳ ದೂರನ್ನು ಆಧರಿಸಿ ಬಂಧನಕ್ಕೊಳಗಾಗಿದ್ದ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್, ತನಗೆ ಜಾಮೀನು ದೊರೆತ ನಂತರವೂ ಜೈಲಿನಿಂದ ಹೊರ ಬರಲು ನಿರಾಕರಿಸಿದ್ದಕ್ಕೆ ಕೇರಳ ಹೈಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಉದ್ಯಮಿ ಬಾಬಿ ಚೆಮ್ಮನೂರ್ ವರ್ತನೆಯಿಂದ ಆಕ್ರೋಶಗೊಂಡ ನ್ಯಾ. ಪಿ.ವಿ.ಕುಞ್ಞಿ ಕೃಷ್ಣನ್, “ನ್ಯಾಯಾಲಯದೊಂದಿಗೆ ನಾಟಕವಾಡಬೇಡಿ” ಎಂದು ಕಟುವಾಗಿ ಎಚ್ಚರಿಸಿದರು. ಒಂದು ವೇಳೆ ಜಾಮೀನು ಮಂಜೂರು ಮಾಡಬಹುದಾದರೆ, ಅದನ್ನು ರದ್ದುಗೊಳಿಸಲೂಬಹುದು ಎಂದು ಅವರು ಹೇಳಿದರು.
ಜಾಮೀನು ದೊರೆತ ನಂತರವೂ ಜೈಲಿನಿಂದ ಯಾಕೆ ಹೊರ ಬರಲಿಲ್ಲ ಎಂಬ ಕುರಿತು ಇಂದು 12 ಗಂಟೆಯೊಳಗೆ ವಿವರಣೆ ನೀಡುವಂತೆ ಬಾಬಿ ಚೆಮ್ಮನೂರ್ ಗೆ ಹೈಕೋರ್ಟ್ ಸೂಚಿಸಿದೆ. ಬಾಬಿ ಚೆಮ್ಮನೂರ್ ಅವರ ಜಾಮೀನು ಆದೇಶವನ್ನು ಮಂಗಳವಾರ ಸಂಜೆ 4.08ಕ್ಕೆ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಯಿತು ಹಾಗೂ ಬಿಡುಗಡೆ ಆದೇಶವನ್ನು ಸಂಜೆ 4.45ಕ್ಕೆ ಹೊರಡಿಸಲಾಯಿತು ಎಂದು ಹೈಕೋರ್ಟ್ ಹೇಳಿದೆ.
“ಜಾಮೀನು ದೊರೆತ ನಂತರವೂ ಅವರೇಕೆ ಜೈಲಿನಲ್ಲೇ ಉಳಿದಿದ್ದಾರೆ” ಎಂದೂ ನ್ಯಾಯಾಲಯ ಪ್ರಶ್ನಿಸಿತು.
ಬಾಬಿ ಚೆಮ್ಮನೂರ್ ಅವರ ವಕೀಲರು ಬಿಡುಗಡೆ ಆದೇಶವನ್ನು ಕಾರಾಗೃಹಕ್ಕೆ ಸಲ್ಲಿಸಿಲ್ಲದೆ ಇರುವುದರಿಂದ, ಅವರನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಗಿಲ್ಲ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಜಾಮೀನು ದೊರೆತ ನಂತರವೂ ಬಾಂಡ್ ಒದಗಿಸಲು ಸಾಧ್ಯವಿಲ್ಲದೇ ಹಲವಾರು ವಿಚಾರಣಾಧೀನ ಕೈದಿಗಳು ಇನ್ನೂ ಕಾರಾಗೃಹದಲ್ಲೇ ಇರುವುದರಿಂದ, ನಾನೂ ಕೂಡಾ ಜೈಲಿನಿಂದ ಹೊರಬರಲ್ಲ ಎಂದು ಉದ್ಯಮಿ ಬಾಬಿ ಚೆಮ್ಮನೂರ್ ಹೇಳಿದ್ದಾರೆ ಎಂದೂ ಪ್ರಾಸಿಕ್ಯೂಷನ್ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಬೆಳವಣಿಗೆಯಿಂದ ಕುಪಿತಗೊಂಡ ಹೈಕೋರ್ಟ್, “ನೀವು (ಬಾಬಿ ಚೆಮ್ಮನೂರ್) ವಿಚಾರಣಾಧೀನ ಕೈದಿಗಳ ವಕಾಲತ್ತು ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರ ಯೋಗಕ್ಷೇಮ ನೋಡಿಕೊಳ್ಳಲು ಹೈಕೋರ್ಟ್ ಹಾಗೂ ನ್ಯಾಯಾಂಗವಿದೆ. ನ್ಯಾಯಾಲಯದೊಂದಿಗೆ ನಾಟಕವಾಡಬೇಡಿ. ಅವರಿಗೆ ಮಾಧ್ಯಮಗಳ ಗಮನ ಸೆಳೆಯುವುದು ಬೇಕಾಗಿದೆ ಹಾಗಾಗಿ ಬಿಡುಗಡೆ ಆದೇಶವನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ಹಲವು ಕತೆಗಳನ್ನು ಸೃಷ್ಟಿಸುತ್ತಿದ್ದಾರೆ. ಅವರ ಜಾಮೀನನ್ನೇಕೆ ರದ್ದುಗೊಳಿಸಬಾರದು” ಎಂದು ಪ್ರಶ್ನಿಸಿತು.