3.5 ಕೋಟಿ ಜನರಿಂದ ಮಕರ ಸಂಕ್ರಾಂತಿಯಂದು ಅಮೃತ ಸ್ನಾನ
ಸಂಗಮ್ (ಪ್ರಯಾಗ್ರಾಜ್): ಮಹಾಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಪವಿತ್ರ ಹಬ್ಬವಾದ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಮಂಗಳವಾರ ಒಂದೇ ದಿನ ಸುಮಾರು 3.5 ಕೋಟಿ ಮಂದಿ ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ ಕ್ಷೇತ್ರದಲ್ಲಿ ಅಮೃತಸ್ನಾನ ಮಾಡಿದರು.
ನಾಗಾ ಸಾಧುಗಳ ಸ್ನಾನದ ಬಳಿಕ ಉಳಿದ ಇತರ ಸ್ವಾಮೀಜಿಗಳು ಸ್ನಾನ ಮಾಡಿದರು. ಲಕ್ಷಾಂತರ ಸಂಖ್ಯೆಯಲ್ಲಿದ್ದ ಅಯಾ ಅಖಾಡಾಗಳ ಅನುಯಾಯಿಗಳು ಸಂಗಮ ಕ್ಷೇತ್ರಕ್ಕೆ ಆಗಮಿಸಿ ಅಮೃತಸ್ನಾನ ಕೈಗೊಂಡರು. ಮೌನಿ ಅಮಾವಾಸ್ಯೆಯ ದಿನವಾದ ಜನವರಿ 29 ಹಾಗೂ ಬಸಂತ ಪಂಚಮಿಯಂದು ಅಂದರೆ ಪೆಬ್ರುವರಿ 3ರಂದು ಇನ್ನೆರಡು ಅಮೃತಸ್ನಾನಗಳು ನಡೆಯಲಿವೆ.
ಸಂಪ್ರದಾಯದ ಪ್ರಕಾರ, ಅಖಾಡಾದ ಭಲದೇವ ಮೊಟ್ಟಮೊದಲ ಪವಿತ್ರಸ್ನಾನ ಕೈಗೊಳ್ಳುತ್ತಾರೆ. ಬಳಿಕ ನಾಗಾಸಾಧುಗಳು ಹಗೂ ಆಚಾರ್ಯ ಮಂಡಲಾಧೀಶ್ವರರು, ಶ್ರೀಗಳು ಸ್ನಾನ ಮಾಡುತ್ತಾರೆ. ಮಹಾನಿರ್ವಾಣಿಗಳ ಬಳಿಕ, ಅಟಲ್ ಅಖಾಡಾ ಸದಸ್ಯರು ಸ್ನಾನ ಕೈಗೊಳ್ಳುತ್ತಾರೆ. ಅಂತೆಯೇ ಇತರ 11 ಅಖಾಡಾಗಳು ಸರದಿಯಲ್ಲಿ ಒಂದರ ಬಳಿಕ ಒಂದು ತಂಡದಂತೆ ಸ್ನಾನ ಕೈಗೊಳ್ಳುತ್ತವೆ.