ಮೋದಿ ಭೇಟಿ ಬೆನ್ನಲ್ಲೇ ಉಮರ್ ಅಬ್ದುಲ್ಲಾ ಗುಣಗಾನ ಮಾಡಿದ ರಾಜನಾಥ್ ಸಿಂಗ್

Update: 2025-01-15 03:02 GMT

PC: x.com/IndianArmyinJK

ಜಮ್ಮು: ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಉಮರ್ ಕಾರ್ಯವೈಖರಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಣಗಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಜನತೆ ಹಾಗೂ ದೇಶದ ಇತರ ಭಾಗಗಳ ಜನರ ನಡುವಿನ ಹೃದಯಗಳ ಅಂತರ ದೂರ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ನೀಡುತ್ತಿರುವ ಸಹಕಾರವನ್ನು ರಕ್ಷಣಾ ಸಚಿವ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ರಕ್ಷಣಾ ಸಚಿವರ ಹೇಳಿಕೆ ಕೇಂದ್ರದ ಎನ್ ಡಿಎ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರಗಳ ನಡುವಿನ ಸೌಹಾರ್ದತೆ ಮತ್ತು ಸಹಕಾರವನ್ನು ದೃಢಪಡಿಸಿದೆ.

ಸಶಸ್ತ್ರ ಪಡೆಗಳ ನಿವೃತ್ತ ಯೋಧರ ಒಂಬತ್ತನೇ ರ್ಯಾಲಿಯನ್ನು ಜಮ್ಮುವಿನ ಅಖನೂರು ವಲಯದ ತಂಡಾ ಸೇತುವೆ ಬಳಿ ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಹಿಂದಿನ ಸರ್ಕಾರಗಳು ಕಾಶ್ಮೀರವನ್ನು ಭಿನ್ನವಾಗಿ ಕಾಣುತ್ತಿದ್ದವು. ಇದರ ಪರಿಣಾಮವಾಗಿ ಈ ಭಾಗದ ನಮ್ಮ ಸಹೋದರ ಸಹೋದರಿಯರು ದೆಹಲಿ ಜತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ" ಎಂದು ಹೇಳಿದ್ದಾರೆ.

"ನಾನು ಇತಿಹಾಸ ಕೆದಕಲು ಹೋಗುವುದಿಲ್ಲ. ನಮ್ಮ ಸರ್ಕಾರದ ಅತಿದೊಡ್ಡ ಸಾಧನೆಯೆಂದರೆ ಕಾಶ್ಮೀರ ಮತ್ತು ದೇಶದ ಇತರ ಭಾಗಗಳ ಜನರ ಹೃದಯಗಳ ಅಂತರವನ್ನು ಕಡಿಮೆ ಮಾಡಲು ಶ್ರಮಿಸುತ್ತಿರುವುದು. ಈ ಅಂತರವನ್ನು ಕಡಿಮೆ ಮಾಡಲು ಉಮರ್ ಅಬ್ದುಲ್ಲಾ ಸರ್ಕಾರ ಸರಿಯಾದ ಹೆಜ್ಜೆಗಳನ್ನ ಇಡುತ್ತಿದೆ" ಎಂದು ಬಣ್ಣಿಸಿದರು.

ಸೋನಾಮಾರ್ಗ್ ಸುರಂಗ ಉದ್ಘಾಟನೆಗೆ ಆಗಮಿಸಿದ್ದ ನರೇಂದ್ರ ಮೋದಿಯವರನ್ನು ಉಮರ್ ಅಬ್ದುಲ್ಲಾ ಶ್ಲಾಘಿಸಿದ್ದರು ಎನ್ನುವುದು ಕೂಡಾ ಗಮನಾರ್ಹ. ಇಂಡಿಯಾ ಬ್ಲಾಕ್ ಭಾಗವಾಗಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ತಮ್ಮ ಮೈತ್ರಿಕೂಟವನ್ನು ಟೀಕಿಸಿ, ಪ್ರಧಾನಿಯವರನ್ನು ಹೊಗಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News