ಪ್ರಧಾನಿ ಮೋದಿಯ ಪದವಿ ಮಾಹಿತಿ ಬಹಿರಂಗಪಡಿಸುವಂತೆ ಸೂಚಿಸಿದ ಆರ್ ಟಿಐ ಆದೇಶವನ್ನು ಪ್ರಶ್ನಿಸಿದ ದಿಲ್ಲಿ ವಿವಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಡಿಸೆಂಬರ್ 2016ರ ಆದೇಶವನ್ನು ಪ್ರಶ್ನಿಸಿ ದಿಲ್ಲಿ ವಿಶ್ವವಿದ್ಯಾಲಯ (ಡಿಯು) ದಿಲ್ಲಿ ಹೈಕೋರ್ಟ್ನ ಮೊರೆ ಹೋಗಿದ್ದು, ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯು ಮೂರನೇ ವ್ಯಕ್ತಿಯ ಕುತೂಹಲವನ್ನು ಪೂರೈಸುವ ಉದ್ದೇಶವನ್ನು ಹೊಂದಿಲ್ಲ ಎಂದು ವಿಶ್ವವಿದ್ಯಾನಿಲಯವು ನ್ಯಾಯಾಲಯದಲ್ಲಿ ವಾದಿಸಿದೆ.
ದಿಲ್ಲಿ ವಿವಿಯನ್ನು ಪ್ರತಿನಿಧಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, “ವಿಶ್ವವಿದ್ಯಾನಿಲಯವು ವಿಶ್ವಾಸಾರ್ಹ ಸಾಮರ್ಥ್ಯದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಹೊಂದಿದೆ. ಆದರೆ, ಅದನ್ನು ಹೊರಗಿನವರಿಗೆ ಬಹಿರಂಗಪಡಿಸಲು ಒತ್ತಾಯಿಸಬಾರದು.“ಆರ್ಟಿಐ ಕಾಯ್ದೆಯ ಸೆಕ್ಷನ್ 6 ಮಾಹಿತಿ ಒದಗಿಸುವುದನ್ನು ಕಡ್ಡಾಯಗೊಳಿಸಿದೆ, ಆದರೆ ಈ ಕಾಯ್ದೆಯು ವೈಯಕ್ತಿಕ ಕುತೂಹಲವನ್ನು ಪೂರೈಸುವ ಉದ್ದೇಶವನ್ನು ಹೊಂದಿಲ್ಲ” ಎಂದು ವಾದಿಸಿದ್ದಾರೆ.
ಆರ್ ಟಿಐ ಕಾರ್ಯಕರ್ತ ನೀರಜ್ ಅವರ ಮನವಿಯ ಮೇರೆಗೆ ಪ್ರಧಾನಿ ಸೇರಿದಂತೆ 1978ರ ಬಿಎ ಪರೀಕ್ಷೆಯ ದಾಖಲೆಗಳ ಪರಿಶೀಲನೆಗೆ ಸಿಐಸಿ ಈ ಹಿಂದೆ ಅನುಮತಿ ನೀಡಿತ್ತು. 1978ರಲ್ಲಿ ಬಿಎ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆಗೆ ಅನುಮತಿ ನೀಡಿದ ಆದೇಶವನ್ನು ದಿಲ್ಲಿ ಹೈಕೋರ್ಟ್ ಜನವರಿ 2017ರಲ್ಲಿ ತಡೆದಿತ್ತು.