ಸಂಭಾಲ್: 12 ಅಂಗಡಿ ಮಾಲೀಕರಿಗೆ ಬುಲ್ಡೋಜರ್ ನೋಟಿಸ್!
ಬರೇಲಿ: ಸಂಭಾಲ್ ನ ಥಾನೇವಾಲಿ ಮಸೀದಿ ಬಳಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿದ್ದು ಎನ್ನಲಾದ 12 ಅಂಗಡಿ ಮಳಿಗೆಗಳ ಮಾಲೀಕರಿಗೆ ಜಿಲ್ಲಾಡಳಿತ ಸೋಮವಾರ ನೋಟಿಸ್ ನೀಡಿದೆ. 24 ಗಂಟೆಗಳ ಒಳಗಾಗಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಇಲ್ಲವೇ ಬುಲ್ಡೋಜರ್ ಕಾರ್ಯಾಚರಣೆಯನ್ನು ಎದುರಿಸಿ ಎಂದು ಎಚ್ಚರಿಕೆ ನೀಡಿದೆ.
"ಅಕ್ರಮ ನಿರ್ಮಾಣಗಳನ್ನು ತಕ್ಷಣ ತೆರವುಗೊಳಿಸುವ ಮೂಲಕ ರಸ್ತೆ ಅಗಲೀಕರಣ ಯೋಜನೆ ಮುಂದುವರಿಯಲು ಅವಕಾಶ ಮಾಡಿಕೊಡಬೇಕು" ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಭಾಲ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಂದನಾ ಮಿಶ್ರಾ ಈ ಬಗ್ಗೆ ಹೇಳಿಕೆ ನೀಡಿ," ಇದನ್ನು ವಕ್ಫ್ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿ ಹಲವು ವರ್ಷಗಳಿಂದ ಮಸೀದಿ ಸಮಿತಿ ಈ ಅಂಗಡಿ ಮಾಲೀಕರಿಂದ ಬಾಡಿಗೆಯನ್ನು ಸ್ವೀಕರಿಸುತ್ತಿತ್ತು. ಈ ಸಂಬಂಧದ ದಾಖಲೆಗಳನ್ನು ಲಕ್ನೋದಿಂದ ತರಿಸಬೇಕು ಎಂದು ಹೇಳಿ ದಾಖಲೆ ಪ್ರಸ್ತುತಪಡಿಸಲು ಸಮಯಾವಕಾಶ ಕೋರಿತ್ತು" ಎಂದು ಸ್ಪಷ್ಟಪಡಿಸಿದ್ದಾರೆ.
ಕೋತ್ವಾಲಿ ಪೊಲೀಸ್ ಠಾಣೆ ಬಳಿ ಒಂದು ಪ್ರಾಚೀನ ಮೆಟ್ಟಿಲು ಬಾವಿ ಪತ್ತೆಯಾದ ಬೆನ್ನಲ್ಲೇ ಈ ನೋಟಿಸ್ ನೀಡಲಾಗಿದೆ. ಈ ಬಾವಿ ಪತ್ತೆಯಾದ ಬಳಿಕ ಜಿಲ್ಲಾಡಳಿತ ಇಡೀ ಪ್ರದೇಶದ ಮೇಲೆ ನಿಗಾ ಇರಿಸಿದೆ. ಸಂಭಾಲ್ ಕೋತ್ವಾಲಿ ಆವರಣದಲ್ಲಿ ವಂದನಾ ಮಿಶ್ರಾ ಸಭೆ ನಡೆಸಿ, 24 ಗಂಟೆಗಳ ಒಳಗಾಗಿ ಮಳಿಗೆಗಳನ್ನು ತೆರವುಗೊಳಿಸುವಂತ ಅಂಗಡಿ ಮಾಲೀಕರಿಗೆ ನೋಟಿಸ್ ಹಸ್ತಾಂತರಿಸಲಾಯಿತು.
"ಕಳೆದ ತಿಂಗಳು ಕೋತ್ವಾಲಿ ಠಾಣೆ ಬಳಿ ಮೆಟ್ಟಿಲು ಬಾವಿ ಮತ್ತು ಸರ್ಕಾರಿ ಜಮೀನಿನಲ್ಲಿ ಹಲವು ಅಕ್ರಮ ಮಳಿಗೆಗಳನ್ನು ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿತ್ತು. ಅಂಗಡಿ ಮಾಲೀಕರು ತಮ್ಮ ಪ್ರತಿಕ್ರಿಯೆಯನ್ನು 24 ಗಂಟೆಗಳ ಒಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆದರೆ ಇದುವರೆಗೂ ಅಗತ್ಯ ದಾಖಲೆಗಳನ್ನು ಒದಗಿಸಿಲ್ಲ. ನೋಟಿಸ್ ಅವಧಿ ಮುಗಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ವಂದನಾ ವಿವರಿಸಿದರು.