ಸಿನಿಮಾ ನೋಡುವ ವಿಚಾರಕ್ಕೆ ಜಗಳ: ಥಿಯೇಟರ್ ನಿಂದ ಎದ್ದು ಬಂದ ಪತ್ನಿಗೆ ಗುಂಡಿಕ್ಕಿದ ಪತಿ!
ಕಲ್ಕತ್ತಾ : ಸಿನಿಮಾ ನೋಡುವ ವಿಚಾರಕ್ಕೆ ಪತಿ- ಪತ್ನಿ ನಡುವೆ ನಡೆದ ವಾಗ್ವಾದ ತಾರಕಕ್ಕೇರಿ ಪತ್ನಿ ಮೇಲೆ ಪತಿ ಮೂರು ಬಾರಿ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ 24- ಪರಗಣ ಜಿಲ್ಲೆಯ ನೈಹಾಟಿಯಲ್ಲಿ ನಡೆದಿದೆ.
ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಮಹೇಂದ್ರ ಪ್ರತಾಪ್ ಘೋಷ್ ಬಂಧಿತ ಆರೋಪಿ. ಈತ ಪತ್ನಿ ಚಂದ್ರಲೇಖಾ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾನೆ. ಎದೆ, ಕೈ ಮತ್ತು ಕಾಲಿಗೆ ಗುಂಡು ತಗುಲಿ ಚಂದ್ರಲೇಖಾ ಘೋಷ್ ಗಂಭೀರ ಸ್ಥಿತಿಯಲ್ಲಿದ್ದು, ಬ್ಯಾರಕ್ ಪುರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.
ರಿವಾಲ್ವರ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಗುಂಡು ತಗುಲಿದೆ ಎಂದು ಪ್ರತಾಪ್ ಘೋಷ್ ಹೇಳಿದ್ದ. ಆದರೆ, ಘಟನೆಯ ಅಸಲಿಯತ್ತು ತಿಳಿಯಲು ಚಂದ್ರಲೇಖಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಪೊಲೀಸರು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನೈಹಾಟಿಯ ರಾಜೇಂದ್ರಪುರದ ನಿವಾಸಿ ಮಹೇಂದ್ರ ಪ್ರತಾಪ್ ಎರಡು ವರ್ಷಗಳ ಹಿಂದೆ ಸೋದೆಪುರ ನಿವಾಸಿ ಚಂದ್ರಲೇಖಾ ಅವರನ್ನು ವಿವಾಹವಾಗಿದ್ದರು. ಆದರೆ ಪತಿ- ಪತ್ನಿ ಸಂಬಂಧ ಚೆನ್ನಾಗಿರಲಿಲ್ಲ. ಆಗಾಗ್ಗೆ ಇಬ್ಬರು ಜಗಳ ಮಾಡಿಕೊಳ್ಳುತ್ತಿದ್ದರು. ರವಿವಾರ ಬಂಗಾಳಿ ಸಿನಿಮಾ ವೀಕ್ಷಿಸಲು ನಾವಿಬ್ಬರು ಜೊತೆಯಾಗಿ ಹೋಗುವ ಎಂದು ಮಹೇಂದ್ರ ಪ್ರತಾಪ್ ಹೇಳಿದ್ದಾನೆ. ಆರಂಭದಲ್ಲಿ ಚಂದ್ರಲೇಖಾ ನಿರಾಕರಿಸಿದರೂ ಕೊನೆಗೆ ಒಪ್ಪಿಕೊಂಡಿದ್ದಾರೆ. ಪತಿ-ಪತ್ನಿ ಇಬ್ಬರು ಸಿನಿಮಾಗೆ ತೆರಳಿದ್ದಾರೆ. ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ಕೂಡ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಚಂದ್ರಲೇಖಾ ಸಿನಿಮಾದಿಂದ ಅರ್ಧದಿಂಲೇ ಮನೆಗೆ ಬಂದಿದ್ದಾರೆ. ಮಹೇಂದ್ರ ಶೋ ಮುಗಿಸಿ ರಾತ್ರಿ 7.15ರ ಸುಮಾರಿಗೆ ಮನೆಗೆ ಬಂದಿದ್ದಾನೆ. ರಾತ್ರಿ 8 ಗಂಟೆಯ ಸುಮಾರಿಗೆ ಚಂದ್ರಲೇಖಾ ಮತ್ತು ಮಹೇಂದ್ರ ಪ್ರತಾಪ್ ನಡುವೆ ಇದೇ ವಿಚಾರಕ್ಕೆ ಮತ್ತೆ ಗಲಾಟೆಯಾಗಿದ್ದು, ಮಹೇಂದ್ರ ಪ್ರತಾಪ್ ಈ ವೇಳೆ ಚಂದ್ರಲೇಖಾ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಹೇಂದ್ರ ಪ್ರತಾಪ್ ಘೋಷ್ ನನ್ನು ಬಂಧಿಸಲಾಗಿದ್ದು, ಆತನಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಈತ ಪತ್ನಿಯ ಮೇಲೆ ಕನಿಷ್ಠ ಮೂರು ಬಾರಿ ಗುಂಡು ಹಾರಿಸಿರುವುದು ಕಂಡು ಬಂದಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.