ಮಧ್ಯಪ್ರದೇಶ | ನಾಲ್ಕು ಮಕ್ಕಳನ್ನು ಹಡೆಯಿರಿ, ಒಂದು ಲಕ್ಷ ರೂಪಾಯಿ ಪಡೆಯಿರಿ: ಬ್ರಾಹ್ಮಣ ಮಂಡಳಿ ಮುಖ್ಯಸ್ಥನಿಂದ ವಿವಾದಾತ್ಮಕ ಕರೆ
ಭೋಪಾಲ್: ಕನಿಷ್ಠ ನಾಲ್ಕು ಮಕ್ಕಳನ್ನು ಹಡೆಯುವ ಆಯ್ಕೆ ಮಾಡಿಕೊಳ್ಳುವ ಬ್ರಾಹ್ಮಣ ದಂಪತಿಗಳಿಗೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಮಧ್ಯಪ್ರದೇಶ ಮಂಡಳಿಯ ಮುಖ್ಯಸ್ಥರೊಬ್ಬರು ಕರೆ ನೀಡಿದ್ದು, ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ರಾಜ್ಯ ಸಂಪುಟ ದರ್ಜೆ ಸಚಿವ ಸ್ಥಾನಮಾನ ಹೊಂದಿರುವ ಪಂಡಿತ್ ವಿಷ್ಣು ರಜೋರಿಯ, ಯುವ ಜನಾಂಗವು ಜನ್ಮ ನೀಡಲು ವಿಳಂಬ ಮಾಡುತ್ತಿರುವುದರಿಂದ ಬಂಜೆತನದ ಸಂಖ್ಯೆ ವೃದ್ಧಿಸುತ್ತಿದೆ ಎಂದೂ ಒತ್ತಿ ಹೇಳಿದ್ದಾರೆ.
"ನನಗೆ ಯುವ ಜನತೆಯಿಂದ ಭಾರಿ ನಿರೀಕ್ಷೆಗಳಿವೆ. ನಾವು ವಯಸ್ಸಾದವರಿಂದ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ. ಎಚ್ಚರಿಕೆಯಿಂದ ಆಲಿಸಿ, ಮುಂದಿನ ಪೀಳಿಗೆಯ ರಕ್ಷಣೆಗೆ ನೀವು ಜವಾಬ್ದಾರರಾಗಿದ್ದೀರಿ. ಯುವ ಜನತೆ ಜೀವನದಲ್ಲಿ ನೆಲೆಗೊಂಡ ನಂತರ, ಒಂದು ಮಗುವಿಗೇ ಅಂತ್ಯಗೊಳಿಸುತ್ತಿದ್ದಾರೆ. ಇದು ತುಂಬಾ ಸಮಸ್ಯಾತ್ಮಕ. ನೀವು ಕನಿಷ್ಠ ನಾಲ್ಕು ಮಕ್ಕಳನ್ನು ಹಡೆಯಬೇಕು ಎಂದು ನಾನು ಆಗ್ರಹಿಸುತ್ತೇನೆ" ಎಂದು ಅವರು ಹೇಳಿದ್ದಾರೆ ಎಂದು NDTV ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಾನು ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ, ನಾಲ್ಕು ಮಕ್ಕಳನ್ನು ಹಡೆಯುವ ದಂಪತಿಗಳಿಗೆ ಪರಶುರಾಮ ಕಲ್ಯಾಣ ಮಂಡಳಿ ವತಿಯಿಂದ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದೂ ರಜೋರಿಯ ಪ್ರಕಟಿಸಿದ್ದಾರೆ.