ನಗದಿದ್ದ ಪರ್ಸ್ ನ ವಾರಸುದಾರಿಕೆಯನ್ನು ಯಾರೂ ಪ್ರತಿಪಾದಿಸದಿರುವುದು ನೋವಾಗಿದೆ: ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್

Update: 2025-01-13 13:28 GMT

ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ | PC : PTI 

ಹೊಸದಿಲ್ಲಿ: ಕಳೆದ ತಿಂಗಳು ಸಂಸತ್ ನ ರಾಜ್ಯಸಭೆಯಲ್ಲಿ ಪತ್ತೆಯಾಗಿದ್ದ ನಗದಿದ್ದ ಪರ್ಸ್ ನ ವಾರಸುದಾರಿಕೆಯನ್ನು ಯಾರೂ ಪ್ರತಿಪಾದಿಸದಿರುವುದರಿಂದ ನನಗೆ ನೋವಾಗಿದೆ ಎಂದು ಸೋಮವಾರ ಹೇಳಿರುವ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್, ನೈತಿಕ ಪ್ರಮಾಣೀಕರಣಕ್ಕೆ ಇದೊಂದು ಕ್ರೋಢೀಕೃತ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು.

ಕಳೆದ ವರ್ಷದ ಡಿಸೆಂಬರ್ 6ರಂದು ಚಳಿಗಾಲದ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿಗೆ ಮೀಸಲಿರಿಸಲಾಗಿದ್ದ ಆಸನದಲ್ಲಿ 500 ರೂ. ಮುಖಬೆಲೆಯ ನೋಟುಗಳ ಪರ್ಸ್ ಒಂದು ಕಂಡು ಬಂದಿತ್ತು. ಈ ಘಟನೆ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ತಮ್ಮ ಆಸನದಲ್ಲಿ ಕಂಡು ಬಂದಿದ್ದ ಪರ್ಸ್ ಕುರಿತು ತನಿಖೆ ನಡೆಸಬೇಕು ಎಂದು ಅಭಿಷೇಕ್ ಸಿಂಘ್ವಿ ಆಗ್ರಹಿಸಿದ್ದರು.

ಅಲ್ಲದೆ, ರಾಜ್ಯಸಭಾ ಸಂಸದರದ ಅನುಪಸ್ಥಿತಿಯಲ್ಲಿ ಯಾರಾದರೂ ಅವರ ಆಸನಗಳಲ್ಲಿ ಗಾಂಜಾ ಇಡುವುದನ್ನು ತಪ್ಪಿಸಲು ಆಸನದ ಸುತ್ತ ಗಾಜಿನ ಕವಚವನ್ನು ನಿರ್ಮಿಸಬೇಕು ಎಂದೂ ಅಭಿಷೇಕ್ ಸಿಂಘ್ವಿ ಸಲಹೆ ನೀಡಿದ್ದರು.

ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಜಗದೀಪ್ ಧನಕರ್, “ನನ್ನ ನೋವನ್ನು ದಯವಿಟ್ಟು ಊಹಿಸಿಕೊಳ್ಳಿ. ಕೇವಲ ಒಂದು ತಿಂಗಳ ಹಿಂದೆ ರಾಜ್ಯಸಭಾ ಸಂಸದರೊಬ್ಬರ ಆಸನದಲ್ಲಿ 500 ರೂ. ಮುಖಬೆಲೆಯ ನೋಟುಗಳಿರುವ ಪರ್ಸ್ ಒಂದು ಪತ್ತೆಯಾಗಿತ್ತು. ನನಗೆ ನಿಜಕ್ಕೂ ನೋವಾಗಿದ್ದೇನೆಂದರೆ, ಯಾರೊಬ್ಬರೂ ಆ ಪರ್ಸ್ ವಾರಸುದಾರಿಕೆಯನ್ನು ಪ್ರತಿಪಾದಿಸಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಇದೊಂದು ಗಂಭೀರ ವಿಷಯ” ಎಂದೂ ಅವರು ಬಣ್ಣಿಸಿದರು.

“ನೀವು ಅಗತ್ಯವಿಲ್ಲದಿದ್ದರೂ, ನೋಟುಗಳನ್ನು ಕೊಂಡೊಯ್ಯಬಹುದು. ಆದರೆ, ಯಾರೊಬ್ಬರೂ ಅದು ತನ್ನದೆಂದು ವಾರಸುದಾರಿಕೆ ಪ್ರತಿಪಾದಿಸಿಲ್ಲ. ಇದು ನಮ್ಮ ನೈತಿಕ ಪ್ರಮಾಣೀಕರಣಕ್ಕೆ ಕ್ರೋಢೀಕೃತ ಸವಾಲಾಗಿದೆ” ಎಂದು ಅವರು ಅಭಿಪ್ರಾಯ ಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News