ಹೋಟೆಲ್ ನೆಲಸಮ ಪ್ರಕರಣ: ತೆಲುಗು ನಟರಾದ ರಾಣಾ ದಗ್ಗುಬಾಟಿ, ವೆಂಕಟೇಶ್ ವಿರುದ್ಧ ಪ್ರಕರಣ ದಾಖಲು

Update: 2025-01-13 11:50 GMT

ವೆಂಕಟೇಶ್(Venkatesh Daggubati \ FACEBOOK) , ರಾಣಾ ದಗ್ಗುಬಾಟಿ (X \ @RanaDaggubati )

ಹೈದರಾಬಾದ್: ಉದ್ಯಮಿಯೊಬ್ಬರು ನಡೆಸುತ್ತಿದ್ದ ಹೋಟೆಲ್ ಒಂದನ್ನು ನೆಲಸಮಗೊಳಿಸಿದ ಆರೋಪದ ಮೇಲೆ ನಟ ವೆಂಕಟೇಶ್ ದುಗ್ಗುಬಾಟಿ, ಅವರ ಸೋದರಳಿಯ ರಾಣಾ ದುಗ್ಗುಬಾಟಿ, ನಿರ್ಮಾಪಕ ಡಿ.ಸುರೇಶ್ ಸೇರಿದಂತೆ ಅವರ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ನ್ಯಾಯಾಲಯವೊಂದರ ನಿರ್ದೇಶನದ ಮೇರೆಗೆ ನಟರು ಹಾಗೂ ಅವರು ಕುಟುಂಬದ ಸದಸ್ಯರ ವಿರುದ್ಧ ಕ್ರಿಮಿನಲ್ ಪಿತೂರಿ, ಅತಿಕ್ರಮಣ ಪ್ರವೇಶ ಹಾಗೂ ಇನ್ನಿತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಡಿ ಫಿಲ್ಮ್ ನಗರ್ ಪೊಲೀಸ್ ಠಾಣೆಯಲ್ಲಿ ಜನವರಿ 11ರಂದು ಎಫ್‌ಐಆರ್ ದಾಖಲಾಗಿದೆ.

ಬಿ‌ಆರ್‌ಎಸ್ ಶಾಸಕರ ಖರೀದಿ ಪ್ರಯತ್ನದಲ್ಲಿ ಆರೋಪಿಯಾಗಿದ್ದ ಹಾಗೂ 2022ರಲ್ಲಿ ಈ ಸಂಬಂಧ ಬಂಧಿತರಾಗಿ, ನಂತರ ಜಾಮೀನು ಮಂಜೂರಾಗಿದ್ದ ವ್ಯಕ್ತಿ ಈ ಪ್ರಕರಣದ ದೂರುದಾರರಾಗಿದ್ದಾರೆ.

ದೂರುದಾರರ ಪ್ರಕಾರ, 2014ರಲ್ಲಿ ಫಿಲ್ಮ್ ನಗರ್ ನಲ್ಲಿರುವ ಜಮೀನಿನನ್ನು ದಗ್ಗುಬಾಟಿ ಕುಟುಂಬವು ಭೋಗ್ಯದ ಆಧಾರದಲ್ಲಿ ಮಾರಾಟ ಮಾಡಿತ್ತು ಹಾಗೂ ನೋಂದಾಯಿತ ಭೋಗ್ಯ ಕರಾರು ಪತ್ರವಾದ ನಂತರ, ತಾನು ಅಲ್ಲಿ ಹೋಟೆಲ್ ನಡೆಸುತ್ತಿದ್ದೆ ಎಂದು ಆರೋಪಿಸಿದ್ದಾರೆ.

ಭೋಗ್ಯ ಕರಾರು ಪತ್ರ ಈಗಲೂ ಚಾಲ್ತಿಯಲ್ಲಿದ್ದು, ನಾನು ವೆಂಕಟೇಶ್ ಹಾಗೂ ಇನ್ನಿತರರ ವಿರುದ್ಧ ತಡೆಯಾಜ್ಞೆ ತಂದ ನಂತರ, ಅವರು ನನ್ನನ್ನು ಆ ಜಾಗದಿಂದ ತೆರವುಗೊಳಿಸಲು ಯತ್ನಿಸಿದ್ದರು. ಈ ಪ್ರಕರಣವಿನ್ನೂ ನಗರ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದೆ. ಮಧ್ಯಂತರ ತಡೆಯಾಜ್ಞೆಯನ್ನು ನೀಡಲಾಗಿದ್ದು, ಈ ತಡೆಯಾಜ್ಞೆಯನ್ನು ಕಾಲಕಾಲಕ್ಕೆ ವಿಸ್ತರಿಸುತ್ತಾ ಬರಲಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ, ಆರೋಪಿಗಳು ಕೆಲವು ಸಮಾಜವಿರೋಧಿ ಶಕ್ತಿಗಳೊಂದಿಗೆ ನನ್ನ ಭೋಗ್ಯದ ಜಮೀನನ್ನು ಪ್ರವೇಶಿಸಿದ್ದು, ಜನವರಿ 2024ರಲ್ಲಿ ನನ್ನ ಹೋಟೆಲ್ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ. ಹೀಗಾಗಿ, ನಾನು ನಂಪಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದೂ ದೂರುದಾರರು ಹೇಳಿದ್ದಾರೆ.

ಅದರಂತೆ ಜನವರಿ 11ರಂದು ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News