ಜೈಪುರ: ವಾಹನದಿಂದ ಡೀಸೆಲ್ ಕದಿಯಲು ಮೂರು ಕಾರ್ಖಾನೆಗಳಿಗೆ ಬೆಂಕಿ ಹಚ್ಚಿದ ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿ!

Update: 2025-01-13 11:39 GMT

ಸಾಂದರ್ಭಿಕ ಚಿತ್ರ | PC : freepik.com

ಜೈಪುರ: ಕನಿಷ್ಠ ಪಕ್ಷ ಮೂರು ಕಾರ್ಖಾನೆಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಜೈಪುರದ ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿಗಳನ್ನು ರವಿವಾರ ಬಂಧಿಸಲಾಗಿದೆ.

ಆರೋಪಿಗಳಾದ ಅಗ್ನಿಶಾಮಕ ಸಿಬ್ಬಂದಿ ವಿಜಯ್ ಶರ್ಮ (25) ಹಾಗೂ ಅಗ್ನಿಶಾಮಕ ವಾಹನದ ಚಾಲಕ ರಾಹುಲ್ ಯಾದವ್ (23) ಕಾರ್ಖಾನೆಗಳಿಗೆ ಬೆಂಕಿ ಹಚ್ಚುತ್ತಿದ್ದರು ಹಾಗೂ ಬೆಂಕಿಯನ್ನು ನಂದಿಸಲು ಹೊರಟಾಗ ಅಗ್ನಿಶಾಮಕ ವಾಹನದಿಂದ ಡೀಸೆಲ್ ಕದ್ದು, ಅದನ್ನು ಮಾರುಕಟ್ಟೆಯಲ್ಲಿ ಲಾಭಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ಆರೋಪಿಗಳು ಕರ್ಧಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ನಾ ದುಂಗರ್ ಅಗ್ನಿಶಾಮಕ ದಳ ಠಾಣೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಕಿ ನಂದಿಸುವ ಹಾಗೂ ಚಾಲನೆಯ ಅನುಭವ ಪ್ರಮಾಣ ಪತ್ರವನ್ನು ಸಲ್ಲಿಸಿದ ನಂತರ, ಖಾಸಗಿ ಗುತ್ತಿಗೆ ಸಂಸ್ಥೆಯೊಂದು ಅವರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಂಡಿತ್ತು ಎಂದು ಪೊಲೀಸರು ಹೇಳಿದ್ದಾರೆ.

“ನಮ್ಮ ತನಿಖೆಯ ಸಂದರ್ಭದಲ್ಲಿ ಆರ್ಐಐಸಿಒ ಪ್ರದೇಶದ ಸರ್ನಾ ದುಂಗರ್ (ಕರ್ಧಾನಿ) ನಲ್ಲಿರುವ ಕಾರ್ಖಾನೆಗೆ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದರು ಎಂಬ ಮಾಹಿತಿಯನ್ನು ಕರ್ಧಾನಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಹರೀಶ್ ಸೋಲಂಕಿ ಸ್ವೀಕರಿಸಿದರು. ನಂತರ ನಾವು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಆರೋಪಿಗಳನ್ನು ಬಂಧಿಸಿದೆವು” ಎಂದು ಸಹಾಯಕ ಪೊಲೀಸ್ ಆಯುಕ್ತ (ಪಶ್ಚಿಮ) ಅಮಿತ್ ಬುದಾನಿಯ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News