ಕೇರಳ | ದಲಿತ ಸಹೋದರಿಯರಿಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಸಿಬಿಐ ಚಾರ್ಜ್ ಶೀಟ್ ನಲ್ಲಿ ಫೋಷಕರ ಹೆಸರು ಉಲ್ಲೇಖ!

Update: 2025-01-13 07:42 GMT

ಸಾಂದರ್ಭಿಕ ಚಿತ್ರ (PTI)

ಪಾಲಕ್ಕಾಡ್: ಕೇರಳದಲ್ಲಿ ಆಡಳಿತ ರೂಢ ಸಿಪಿಐ(ಎಂ) ಮತ್ತು ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ನಡುವಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾದ ಪ್ರಕರಣವೊಂದು ಮಹತ್ವದ ತಿರುವನ್ನು ಪಡೆದುಕೊಂಡಿದೆ. 2017ರಲ್ಲಿ ಕೇರಳದ ಪಾಲಕ್ಕಾಡ್ ನಲ್ಲಿ ದಲಿತ ಕುಟುಂಬಕ್ಕೆ ಸೇರಿದ ಇಬ್ಬರು ಬಾಲಕಿಯರು ಕೆಲವೇ ದಿನಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯದಲ್ಲಿ ಭಾರೀ ಸದ್ದು ಮಾಡಿದ ಈ ಪ್ರಕರಣದಲ್ಲಿ ಇದೀಗ ಬಾಲಕಿಯರ ಪೋಷಕರೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಸಿಬಿಐ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

ಕೊಚ್ಚಿಯ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಬಾಲಕಿಯರ ಪೋಷಕರ ಹೆಸರು ಉಲ್ಲೇಖಿಸಲಾಗಿದೆ. ಸಿಬಿಐ ಅಪ್ರಾಪ್ತ ಬಾಲಕಿಯ ಫೋಷಕರನ್ನೇ ಆರೋಪಿಗಳನ್ನಾಗಿ ವಿಚಾರಣೆಗೆ ಒಳಪಡಿಸಿದ್ದು, ಬಾಲಕಿಯ ಪೋಷಕರ ವಿರುದ್ಧ ಲೈಂಗಿಕ ದೌರ್ಜನ್ಯ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109 ಅಪರಾಧಕ್ಕೆ ಪ್ರಚೋದನೆ ಮತ್ತು ಪೋಕ್ಸೊ ಕಾಯ್ದೆಯ ವಿವಿಧ ನಿಬಂಧನೆಗಳಡಿ ಪ್ರಕರಣ ದಾಖಲಿಸಿಕೊಂಡಿದೆ.

ಏನಿದು ಪ್ರಕರಣ?:

2017ರ ಜನವರಿ 13ರಂದು ಕೇರಳ-ತಮಿಳುನಾಡು ಗಡಿಯಲ್ಲಿರುವ ವಲಯಾರ್ ಬಳಿ ದಲಿತ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಆಕೆಯ 9ರ ಹರೆಯದ ಸಹೋದರಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಅಪ್ರಾಪ್ತ ಸಹೋದರಿಯರ ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರಕ್ಕೊಳಗಾಗಿರುವುದು ಬಹಿರಂಗವಾಗಿತ್ತು.

ರಾಜಕೀಯ ತಿರುವು ಪಡೆದುಕೊಂಡಿದ್ದ ಪ್ರಕರಣ:

ಆರಂಭದಿಂದಲೂ ಈ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿತ್ತು. ಸಂತ್ರಸ್ತ ಬಾಲಕಿಯರ ಕುಟುಂಬವು ಆರೋಪಿಗಳಿಗೆ ಆಡಳಿತ ಪಕ್ಷದ ಬೆಂಬಲವಿದೆ ಎಂದು ಆರೋಪಿಸಿತ್ತು. ಸಿಪಿಐ(ಎಂ) ಯುವ ಘಟಕ ಡಿವೈಎಫ್ ಐ ಕಾರ್ಯಕರ್ತರೊಂದಿಗೆ ಆರೋಪಿಗಳು ಇರುವ ಫೋಟೋಗಳು ವೈರಲ್ ಬಳಿಕ ಈ ಆರೋಪವು ಮತ್ತಷ್ಟು ಬಲವಾಗಿತ್ತು.

ಆದರೆ, 2019ರಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೊ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಆಪಾದಿತ ಅಪರಾಧಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿತ್ತು. ಬಾಲಕಿಯೋರ್ವಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸಂತ್ರಸ್ತೆಯ ದೇಹದ ಭಾಗವೊಂದರಲ್ಲಿದ್ದ ಗಾಯಕ್ಕೆ ಪೈಲ್ಸ್ ಸೋಂಕು ಕಾರಣ ಎಂದು ಹೇಳಿದ್ದರು. ಇದು ಆರೋಪಿಗಳನ್ನು ಖುಲಾಸೆಗೊಳಿಸಲು ಪ್ರಮುಖ ಕಾರಣವಾಗಿತ್ತು.

ಆರೋಪಿಗಳ ಖುಲಾಸೆ ಬೆನ್ನಲ್ಲೇ ತನಿಖೆಯಲ್ಲಿ ಲೋಪವಾಗಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ, ಆಡಳಿತರೂಢ ಸಿಪಿಐ(ಎಂ) ಸರ್ಕಾರದ ವಿರುದ್ಧ ವಾಕ್ಸಮರ ನಡೆಸಿತ್ತು. ಸಿಪಿಐ(ಎಂ) ಸರ್ಕಾರ ಆರೋಪಿಗಳ ಪರವಾಗಿ ನಿಂತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಕೋಡಿಕ್ಕುನ್ನಿಲ್ ಸುರೇಶ್ ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಒತ್ತಡದ ಮೇರೆಗೆ ಸರ್ಕಾರ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ. ಆದರೆ, ಕೇರಳ ಹೈಕೋರ್ಟ್ ಸಂತ್ರಸ್ತ ಬಾಲಕಿಯರ ತಾಯಿಯ ಅರ್ಜಿಯ ಮೇರೆಗೆ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು.

2021ರ ವಿಧಾನಸಭಾ ಚುನಾವಣೆಯಲ್ಲಿ ಸಂತ್ರಸ್ತ ಬಾಲಕಿಯರ ತಾಯಿ ಸಿಪಿಐ(ಎಂ) ಭದ್ರಕೋಟೆಯಾದ ಧರ್ಮಡಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸ್ಪರ್ಧಿಸಿದ್ದರು, ತನ್ನ ಹೆಣ್ಣುಮಕ್ಕಳಿಗೆ ನ್ಯಾಯಕ್ಕಾಗಿ ಸಾಂಕೇತಿಕ ಹೋರಾಟವನ್ನು ನಡೆಸಿದ್ದರು.

ಪ್ರಕರಣದ ಇತ್ತೀಚಿನ ತಿರುವುಗಳ ಕುರಿತು ಪ್ರತಿಕ್ರಿಯಿಸಿದ ಪಾಲಕ್ಕಾಡ್ ನಿವಾಸಿ ಸಿಪಿಐ(ಎಂ) ಸಚಿವ ಎಂ ಬಿ ರಾಜೇಶ್, ಒಂದು ದಿನ ಸತ್ಯ ಹೊರಬರುತ್ತದೆ. ಸರ್ಕಾರ ಮತ್ತು ಪೊಲೀಸರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂಬುದು ಸ್ಪಷ್ಟವಾಗಿದೆ. ಘಟನೆಗೆ ಸಂಬಂಧಿಸಿದ ವಿವಾದಗಳು ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದ್ದಾರೆ.

ಪಾಲಕ್ಕಾಡ್ ನವರೇ ಆದ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ವಿ.ಟಿ. ಬಲರಾಮ್ ಈ ಕುರಿತು ಪ್ರತಿಕ್ರಿಯಿಸಿದ್ದು, ನಾವು ಸಂತ್ರಸ್ತರಿಗೆ ನ್ಯಾಯ ಒದಗಿಸುವುದನ್ನು ಬೆಂಬಲಿಸಿದೆವು. ಸಿಬಿಐ ಪೋಷಕರನ್ನು ಆರೋಪಿಗಳೆಂದು ಹೆಸರಿಸಿದಾಗ, ನೈಜ ಆರೋಪಿಗಳು ಇದರಿಂದ ಪ್ರಯೋಜನ ಪಡೆಯಬಹುದು ಎಂದು ನಾವು ಆತಂಕಗೊಂಡಿದ್ದೇವೆ. ಆರೋಪಿಗಳು ಸಿಪಿಐ(ಎಂ) ಜೊತೆ ಸಂಬಂಧ ಹೊಂದಿದ್ದಾರೆ ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.

ಸಿಬಿಐ ಬಾಲಕಿಯರ ತಾಯಿಯನ್ನೇ ಆರೋಪಿಯನ್ನಾಗಿ ಹೆಸರಿಸಿದ ನಂತರ ಬಾಲಕಿಯರ ತಾಯಿ ರಾಜ್ಯ ಪೊಲೀಸರ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ, ಕೇರಳ ಪೊಲೀಸರು ಪ್ರಕರಣವನ್ನು ಪರಿಣಾಮಕಾರಿಯಾಗಿ ತನಿಖೆ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದಾಗ ಸಿಬಿಐ ನಮ್ಮನ್ನು ಆರೋಪಿಗಳನ್ನಾಗಿ ಮಾಡಿದೆ. ನಾವು ಎಲ್ಲಾ ವಿವರಗಳನ್ನು ಸಿಬಿಐ ಜೊತೆ ಹಂಚಿಕೊಂಡಿದ್ದೇವೆ, ಆದರೆ ಅವರು ತನಿಖೆ ನಡೆಸಲಿಲ್ಲ. ಪ್ರಕರಣದ ನಿಜವಾದ ಅಪರಾಧಿಗಳನ್ನು ಬಂಧಿಸುವವರೆಗೆ ನಮ್ಮ ಆಂದೋಲನ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News