ಕಳಪೆ ದರ್ಜೆಯ ಹೆಲ್ಮೆಟ್ ಬಳಕೆ ವಿರುದ್ಧ ಕೇಂದ್ರ ಸರಕಾರದಿಂದ ರಾಷ್ಟ್ರವ್ಯಾಪಿ ಅಭಿಯಾನ

Update: 2024-10-27 14:04 GMT

Credit: iStock Photo | ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ದ್ವಿಚಕ್ರ ವಾಹನ ಸವಾರರನ್ನು ರಕ್ಷಿಸಲು ಕಳಪೆ ದರ್ಜೆಯ ಹೆಲ್ಮೆಟ್‌ಗಳ ಉತ್ಪಾದನೆ ಹಾಗೂ ಮಾರಾಟದ ವಿರುದ್ಧ ಗ್ರಾಹಕ ವ್ಯವಹಾರಗಳ ಇಲಾಖೆ (ಡಿಒಸಿಒ) ರಾಷ್ಟ್ರವ್ಯಾಪಿ ವಿಶೇಷ ಅಭಿಯಾನ ಆರಂಭಿಸಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಲ್ಮೆಟ್‌ಗಳ ಗುಣಮಟ್ಟ ಹಾಗೂ ರಸ್ತೆಯಲ್ಲಿ ಜೀವ ರಕ್ಷಿಸುವಲ್ಲಿ ಅದರ ನಿರ್ಣಾಯಕ ಪಾತ್ರದ ಕುರಿತ ಕಳವಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವ ಉತ್ಪಾದಕರು ಹಾಗೂ ಚಿಲ್ಲರೆ ಮಾರಾಟಗಾರರನ್ನು ಗುರಿಯಾಗಿರಿಸಿ ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸುವಂತೆ ಡಿಒಸಿಎ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ಪತ್ರ ಬರೆದಿದೆ.

ಇಲ್ಲಿಯವರೆಗೆ 162 ಹೆಲ್ಮೆಟ್ ತಯಾರಕರ ಪರವಾನಿಗೆಗಳನ್ನು ರದ್ದುಗೊಳಿಸಲಾಗಿದೆ ಅಥವಾ ಅದರ ಅವಧಿ ಮುಗಿದಿದೆ. ಇದಲ್ಲದೆ ಇಂದಿನ ದಿನಾಂಕದವರೆಗೆ ಐಎಸ್‌4151:2015ಕ್ಕೆ ಸಂಬಂಧಿಸಿದ ಗುಣಮಟ್ಟ ನಿಯಂತ್ರಣ ಆದೇಶ (ಕ್ಯುಸಿಒ) ಉಲ್ಲಂಘಿಸಿದ ಅಥವಾ ಬಿಐಎಸ್ ಗುಣಮಟ್ಟದ ಚಿಹ್ನೆಯನ್ನು ದುರ್ಬಳಕೆ ಮಾಡಿದ ಹಿನ್ನೆಲೆಯಲ್ಲಿ ಒಟ್ಟು 27 ಶೋಧ ಕಾರ್ಯಾಚರಣೆ ನಡೆಸಲಾಗಿದೆ ಹಾಗೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಕ್ಯುಸಿಒವನ್ನು 2021 ಜೂನ್ 1ರಿಂದ ಅನುಷ್ಠಾನಗೊಳಿಸಿದ್ದು, ಎಲ್ಲಾ ಹೆಲ್ಮೆಟ್‌ಗಳು ಬಿಐಎಸ್ ಗುಣಮಟ್ಟ ಐಎಸ್‌1451:2015 ಅನುಸರಿಸುವುದನ್ನು ಕಡ್ಡಾಯಗೊಳಿಸಿದೆ.

ಈ ಪ್ರಮಾಣೀಕರಣ ಇಲ್ಲದೆ ಯಾವುದೇ ಹೆಲ್ಮೆಟ್‌ನ ಉತ್ಪಾದನೆ ಅಥವಾ ಮಾರಾಟ ಭಾರತೀಯ ಗುಣಮಟ್ಟ ಕಾಯ್ದೆ, 2016ರ ಉಲ್ಲಂಘನೆ. ರಸ್ತೆ ಬದಿಯಲ್ಲಿ ಮಾರಾಟವಾಗುವ ಅನೇಕ ಹೆಲ್ಮೆಟ್‌ಗಳು ಬಿಐಎಸ್ ಪ್ರಮಾಣೀಕರಣವನ್ನು ಹೊಂದಿರುವುದಿಲ್ಲ ಎಂಬುದನ್ನು ಗಮನಿಸಲಾಗಿದೆ. ಇದು ಸವಾರರಿಗೆ ಗಮನಾರ್ಹ ಅಪಾಯವನ್ನು ತಂದೊಡ್ಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News