ಮಧ್ಯಪ್ರದೇಶ | ಲುಂಗಿ ತೊಟ್ಟು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಸಬ್ ಇನ್ಸ್ ಪೆಕ್ಟರ್!

Update: 2024-10-27 14:46 GMT

Screengrab : X

ಮೌಗಂಜ್ : ಲುಂಗಿ ತೊಟ್ಟ ಓರ್ವ ಸಬ್ ಇನ್ಸ್ ಪೆಕ್ಟರ್, ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಿಗೇ, ಆರೋಪಿ ಸಬ್ ಇನ್ಸ್ ಪೆಕ್ಟರ್ ಅನ್ನು ಎಕ್ಸಿಕ್ಯೂಟಿವ್ ಹುದ್ದೆಯಿಂದ ತೆಗೆದು ಹಾಕಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ.

ದೂರು ದಾಖಲಿಸಲು ಬಂದ ಮಹಿಳೆಯೊಬ್ಬರೊಂದಿಗೆ ಹತಾ ಹೊರ ಠಾಣೆಯ ಉಸ್ತುವಾರಿ ಸಬ್ ಇನ್ಸ್ ಪೆಕ್ಟರ್ ಬೃಹಸ್ಪತಿ ಪಟೇಲ್ (50) ಲುಂಗಿ ತೊಟ್ಟು ಅನುಚಿತವಾಗಿ ವರ್ತಿಸಿರುವುದು ವಿಡಿಯೊದಲ್ಲಿ ಕಂಡು ಬಂದಿರುವುದರಿಂದ, ಅವರನ್ನು ಎಕ್ಸಿಕ್ಯೂಟಿವ್ ಹುದ್ದೆಯಿಂದ ತೆಗೆದು ಹಾಕಲಾಗಿದೆ ಎಂದು ರೇವಾ ವಲಯದ ಪೊಲೀಸ್ ಮಹಾ ನಿರೀಕ್ಷಕ ಸಾಕೇತ್ ಪಾಂಡೆ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮಹಿಳೆಯ ದೂರನ್ನು ಆಧರಿಸಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದ್ದು, ಜಿಲ್ಲಾ ಮುಖ್ಯ ಕಚೇರಿಯಿಂದ ಸುಮಾರು 50 ಕಿಮೀ ದೂರ ಇರುವ ಈ ಹೊರ ಠಾಣೆಯಲ್ಲಿ ನಡೆದಿರುವ ಘಟನೆಯ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಬ್ ಇನ್ಸ್ ಪೆಕ್ಟರ್ ಬೃಹಸ್ಪತಿ ಪಟೇಲ್ ಮಹಿಳೆಯೊಬ್ಬರ ಮೇಲೆ ಕೂಗಾಡುತ್ತಾ, “ಚಾಣಾಕ್ಷವಾಗಿ ವರ್ತಿಸಬೇಡ” ಎಂದು ಹೇಳುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. ನಂತರ ಸಬ್ ಇನ್ಸ್ ಪೆಕ್ಟರ್ ಪಟೇಲ್ ಆ ಮಹಿಳೆಯನ್ನು ಠಾಣೆಯಿಂದ ಹೊರಗೆ ಎಳೆದೊಯ್ದಿದ್ದು, ಈ ವೇಳೆ ಮತ್ತೋರ್ವ ಮಹಿಳೆ ಅವರೆದುರು ನೆಲದಲ್ಲಿ ಕುಳಿತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News