ಡಾನಾ ಚಂಡಮಾರುತ | ಒಡಿಶಾದಲ್ಲಿ 35.95 ಲಕ್ಷ ಜನರು ಸಂತ್ರಸ್ತರು ; ಯಾವುದೇ ಸಾವು ಸಂಭವಿಸಿಲ್ಲ : ರಾಜ್ಯದ ಸಚಿವ ಸುರೇಶ್ ಪುಜಾರಿ

Update: 2024-10-27 16:07 GMT

PTI

ಭುವನೇಶ್ವರ : ಡಾನಾ ಚಂಡಮಾರುತ ಮತ್ತು ನಂತರದ ನೆರೆಹಾವಳಿಯಿಂದಾಗಿ ಒಡಿಶಾದ 14 ಜಿಲ್ಲೆಗಳಲ್ಲಿಯ ಒಟ್ಟು 35.95 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ ಎಂದು ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಸುರೇಶ್ ಪುಜಾರಿ ಅವರು ರವಿವಾರ ತಿಳಿಸಿದರು.

8,10,896 ಜನರನ್ನು ಚಂಡಮಾರುತ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದೂ ಅವರು ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುಜಾರಿ, ಕೇಂದ್ರಪಾಡಾ, ಬಾಲಾಸೋರ ಮತ್ತು ಭದ್ರಕ್ ತೀವ್ರ ಹಾನಿಗೊಳಗಾದ ಜಿಲ್ಲೆಗಳಲ್ಲಿ ಸೇರಿವೆ. ಆದರೆ ಈವರೆಗೆ ಯಾವುದೇ ಮಾನವ ಜೀವಹಾನಿಯಾಗಿಲ್ಲ. ರವಿವಾರ ಬೆಳಿಗ್ಗೆ 10:30ರ ವೇಳೆಗೆ ಸ್ಥಳಾಂತರಿತ ಜನರನ್ನು 1,178 ಚಂಡಮಾರುತ ಪರಿಹಾರ ಕೇಂದ್ರಗಳಲ್ಲಿ ನೆಲೆಗೊಳಿಸಲಾಗಿದೆ. ಅವರಿಗೆ ಆಹಾರ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಪ್ರಕೃತಿ ವಿಕೋಪದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡಿರುವವರಿಗೆ ಪಾಲಿಥೀನ್ ಶೀಟ್‌ ಗಳನ್ನು ಪೂರೈಸಲಾಗುತ್ತಿದೆ. ಶುಕ್ರವಾರ ನಸುಕಿನಲ್ಲಿ ಅಪ್ಪಳಿಸಿದ ಡಾನಾ ಚಂಡಮಾರುತವು 14 ಜಿಲ್ಲೆಗಳಲ್ಲಿಯ 1,671 ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಹೇಳಿದರು.

‘ಪ್ರಾಥಮಿಕ ವರದಿಗಳಂತೆ ಡಾನಾ ಚಂಡಮಾರುತ ಮತ್ತು ಪ್ರವಾಹದಿಂದಾಗಿ ಸುಮಾರು 5,840 ಮನೆಗಳು ಸಂಪೂರ್ಣ ಅಥವಾ ಭಾಗಶಃ ಹಾನಿಗೀಡಾಗಿವೆ. ಪ್ರಕೃತಿ ವಿಕೋಪ ಸಂಭವಿಸಿದಾಗೆಲ್ಲ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುತ್ತಾರೆ ಮತ್ತು ಪರಿಹಾರವನ್ನು ಪಡೆಯುತ್ತಾರೆ. ಈ ಸಲ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ರೂಪಿಸಲು ನಾವು ಬಯಸಿದ್ದೇವೆ ಮತ್ತು ಸಂತ್ರಸ್ತರಿಗೆ ಪಕ್ಕಾ ಮನೆಗಳನ್ನು ಒದಗಿಸಲು ಉದ್ದೇಶಿಸಿದ್ದೇವೆ’ ಎಂದು ಹೇಳಿದ ಅವರು, ಒಡಿಶಾ ಸರಕಾರವು ರಾಜ್ಯದಲ್ಲಿ ಚಂಡಮಾರುತ ಮತ್ತು ಪ್ರವಾಹಗಳಿಗೆ ತುತ್ತಾಗುವ ಪ್ರದೇಶಗಳಲ್ಲಿಯ ಕಚ್ಚಾ ಮನೆಗಳ ಸಮೀಕ್ಷೆಯನ್ನು ನಡೆಸಲು ಯೋಜಿಸುತ್ತಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News