ತಮಿಳುನಾಡು ಡೈರಿಯಿಂದ ತಿರುಪತಿ ಲಡ್ಡುಗೆ ಬಳಸಲಾಗಿರುವ ಕಲಬೆರಕೆ ತುಪ್ಪ ಸರಬರಾಜಾಗಿಲ್ಲ : ವರದಿ
ಹೊಸದಿಲ್ಲಿ: ಗುತ್ತಿಗೆ ಒಪ್ಪಂದದಂತೆ 2024ರ ಜೂನ್ ಮತ್ತು ಜುಲೈ ತಿಂಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನಂಗೆ ಸರಬರಾಜು ಮಾಡಲಾಗಿರುವ ಎಂಟು ಟ್ಯಾಂಕರ್ ತುಪ್ಪವನ್ನು ತಮಿಳುನಾಡು ಮೂಲದ ಎ.ಆರ್.ಡೈರಿಯಿಂದ ಪೂರೈಸಲಾಗಿಲ್ಲ ಎಂದು ಇತ್ತೀಚಿನ ತನಿಖೆಯಲ್ಲಿ ವಾಣಿಜ್ಯ ತೆರಿಗೆಗಳ ಇಲಾಖೆ ದೃಢಪಡಿಸಿದೆ.
ಬದಲಿಗೆ, ತಿರುಮಲ ತಿರುಪತಿ ದೇವಸ್ಥಾನಕ್ಕೆ ಕಳಿಸುವುದಕ್ಕೂ ಮುನ್ನ ಉತ್ತರಾಖಂಡದ ಭೋಲೆ ಬಾಬಾ ಆರ್ಗಾನಿಕ್ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್ ನಿಂದ ತಿರುಪತಿಯಲ್ಲಿನ ವೈಷ್ಣವಿ ಡೈರಿ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಮೊದಲು ತುಪ್ಪವನ್ನು ಖರೀದಿಸಿದೆ ಎಂದು ಹೇಳಲಾಗಿದೆ.
ವೈಷ್ಣವಿ ಡೈರಿಯು ಭೋಲೆ ಬಾಬಾ ಡೈರಿಯಿಂದ ವಿವಿಧ ದರಗಳಲ್ಲಿ ತುಪ್ಪ ಖರೀದಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಆ ತುಪ್ಪವನ್ನು ಕಲಬೆರಕೆ ಮಾಡಿದ ನಂತರ, ಕಡಿಮೆ ದರಕ್ಕೆ ಎ.ಆರ್.ಡೈರಿಗೆ ಸರಬರಾಜು ಮಾಡಿದೆ. ನಾಲ್ಕು ಟ್ಯಾಂಕರ್ ಗಳಿಂದ ಸಂಗ್ರಹಿಸಲಾಗಿದ್ದ ಮಾದರಿಯಲ್ಲಿ ಪ್ರಾಣಿ ಕೊಬ್ಬು ಇರುವುದು ಕಂಡು ಬಂದ ನಂತರ, ಎ.ಆರ್.ಡೈರಿಗೆ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ನೋಟಿಸ್ ಜಾರಿಗೊಳಿಸಿತ್ತು ಎಂದು ಹೇಳಲಾಗಿದೆ.
ಮತ್ತಷ್ಟು ವಿಶ್ಲೇಷಣೆಯನ್ವಯ, ಇ-ಇನ್ವಾಯ್ಸ್ ಗಳು ಹಾಗೂ ಇ-ವೇ ಬಿಲ್ ಗಳು ಟ್ಯಾಂಕರ್ ಸಾಗಾಟವನ್ನು ದಾಖಲಿಸಿದ್ದು, ಈ ಸಾಗಾಟವು ಮೂಲ ತಮಿಳುನಾಡಿನಿಂದ ಮಾರ್ಗ ಬದಲಾಯಿಸಿರುವುದು ಕಂಡು ಬಂದಿದೆ. ಇದರೊಂದಿಗೆ, ತುಪ್ಪದ ವ್ಯಾಪಾರವನ್ನು ನಿಷೇಧಿಸಿದ್ದ ಗುತ್ತಿಗೆ ಕರಾರನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ. ಈ ಶೋಧನೆಗಳನ್ನು ಆಧರಿಸಿ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯು ಎ.ಆರ್.ಡೈರಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದು, ಎ.ಆರ್.ಡೈರಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗಿದೆ.