ಭಾರತದಲ್ಲಿ ತೆವಳುತ್ತಿರುವ ಮೂಲಸೌಕರ್ಯ ಯೋಜನೆಗಳಿಗೆ ಬಾಂದ್ರಾ ನಿಲ್ದಾಣದಲ್ಲಿನ ಕಾಲ್ತುಳಿತ ಪ್ರಕರಣ ತಾಜಾ ನಿದರ್ಶನ : ರಾಹುಲ್ ಗಾಂಧಿ

Update: 2024-10-27 17:31 GMT

ರಾಹುಲ್ ಗಾಂಧಿ | PC : PTI

ಹೊಸದಿಲ್ಲಿ : ಭಾರತದಲ್ಲಿ ತೆವಳುತ್ತಿರುವ ಮೂಲಸೌಕರ್ಯ ಯೋಜನೆಗಳಿಗೆ ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಕಾಲ್ತುಳಿತ ಪ್ರಕರಣ ತಾಜಾ ನಿದರ್ಶನ ಎಂದು ರವಿವಾರ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಯೋಜನೆಗಳಿಗೆ ನೆರವೇರಿಸುವ ಶಿಲಾನ್ಯಾಸವು ಸಾರ್ವಜನಿಕರ ಹಿತಾಸಕ್ತಿಯಿಂದ ಕೂಡಿದ್ದರೆ, ಉದ್ಘಾಟನೆಗಳು ಹಾಗೂ ಪ್ರಚಾರಗಳು ಸ್ವೀಕಾರಾರ್ಹವಾಗುತ್ತವೆ. ನಿರ್ವಹಣೆಯ ಕೊರತೆ ಹಾಗೂ ಸಾರ್ವಜನಿಕ ಆಸ್ತಿಗಳು, ಸೇತುವೆಗಳು, ಅಂಕಣಗಳು ಹಾಗೂ ಪ್ರತಿಮೆಗಳು ಟೇಪನ್ನು ಕತ್ತರಿಸಿದ ನಂತರ ತೆವಳತೊಡಗುವುದರಿಂದ, ಜನರು ತಮ್ಮ ಜೀವ ಕಳೆದುಕೊಳ್ಳುವಂತಾಗುವುದು ತೀವ್ರ ಕಳವಳಕಾರಿ ಸಂಗತಿ” ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಬಾಲಾಸೋರ್ ಬಳಿ ನಡೆದಿದ್ದ ರೈಲು ಅಪಘಾತದಲ್ಲಿ 300 ಮಂದಿ ತಮ್ಮ ಜೀವ ಕಳೆದುಕೊಂಡಿದ್ದರು. ಸಂತ್ರಸ್ತರಿಗೆ ಪರಿಹಾರ ನೀಡುವ ಬದಲು, ಅವರೆಲ್ಲ ಸುದೀರ್ಘ ಕಾಲದ ಕಾನೂನು ಹೋರಾಟದಲ್ಲಿ ಸಿಲುಕಿಕೊಳ್ಳುವಂತೆ ಬಿಜೆಪಿ ಸರಕಾರ ಮಾಡಿದೆ ಎಂದೂ ಅವರು ಆರೋಪಿಸಿದ್ದಾರೆ.

ರವಿವಾರ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಗೋರಖ್ ಪುರ್ ಗೆ ತೆರಳುತ್ತಿದ್ದ ರೈಲಿಗೆ ಹತ್ತಲು ಪ್ರಯಾಣಿಕರು ಮುಂದಾದಾಗ, ನೂಕುನುಗ್ಗಲುಂಟಾಗಿ ನಡೆದ ಕಾಲ್ತುಳಿತ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ನಾಗರಿಕ ಹಾಗೂ ವಿಪತ್ತು ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಘಟನೆಯಲ್ಲಿ ಇಬ್ಬರು ಮಾತ್ರ ಗಾಯಗೊಂಡಿದ್ದಾರೆ ಎಂದು ಪಶ್ಚಿಮ ರೈಲ್ವೆ ವಲಯವು ಪ್ರಕಟಣೆಯಲ್ಲಿ ತಿಳಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News