ಹೇಮಂತ್ ಸೊರೇನ್ ವಿರುದ್ಧ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಬಿಜೆಪಿ 5 ಕೋಟಿ ರೂ. ಆಮಿಷ ಒಡ್ಡುತ್ತಿದೆ: ಜೆಎಂಎಂ ನಾಯಕನ ಆರೋಪ
ರಾಂಚಿ: ಮುಖ್ಯಮಂತ್ರಿ ಹೇಮಂತ್ ವಿರುದ್ಧ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಗೆ ರೂ. 5 ಕೋಟಿ ನೀಡಲಾಗುವುದು ಎಂದು ಬಿಜೆಪಿ ಆಮಿಷ ಒಡ್ಡುತ್ತಿದೆ ಎಂದು ರವಿವಾರ ಜೆಎಂಎಂ ನಾಯಕ ಮನೋಜ್ ಪಾಂಡೆ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಸ್ವಕ್ಷೇತ್ರ ಬರ್ಹೈತ್ ನಲ್ಲಿ ಅವರ ವಿರುದ್ಧ ಸ್ಪರ್ಧಿಸಬಲ್ಲ ಸೂಕ್ತ ಅಭ್ಯರ್ಥಿ ಬಿಜೆಪಿಗೆ ದೊರೆತಿಲ್ಲ ಎಂದು ಅವರು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಅವರು ಇನ್ನೂ ಹುಡುಕಾಟ ನಡೆಸುತ್ತಿದ್ದು, ಇನ್ನೂ ಸೂಕ್ತ ಅಭ್ಯರ್ಥಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹೇಮಂತ್ ಸೊರೇನ್ ವಿರುದ್ಧ ಸ್ಪರ್ಧಿಸಲು ಮುಂದಾಗುವ ಯಾವುದೇ ಅಭ್ಯರ್ಥಿಗೆ ರೂ. 5 ಕೋಟಿ ಪ್ಯಾಕೇಜ್ ಒದಗಿಸಲಾಗುವುದು ಎಂದು ಬಿಜೆಪಿ ಆಂತರಿಕವಾಗಿ ಆಮಿಷವೊಡ್ಡಿದೆ ಎಂಬ ಮಾಹಿತಿ ನಮಗೆ ದೊರೆತಿದೆ. ಈಗ ಅವರು ಹಣ ನೀಡಿ ಅಭ್ಯರ್ಥಿಯನ್ನು ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿಯೇಕೆ ಇಂತಹ ನಡೆಗೆ ಮುಂದಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೇಮಂತ್ ಸೊರೇನ್ ಕ್ಷೇತ್ರದಲ್ಲಿ ತಮ್ಮ ಪಕ್ಷದ ಮತ ಗಳಿಕೆ 100-150 ದಾಟುವುದಿಲ್ಲ ಎಂದು ಬಿಜೆಪಿಗೆ ತಿಳಿದಿದೆ. ಹೀಗಾಗಿಯೇ ಯಾವುದೇ ಅಭ್ಯರ್ಥಿಗೂ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಸ್ಪರ್ಧಿಸುವುದು ಬೇಡವಾಗಿದೆ” ಎಂದು ಉತ್ತರಿಸಿದ್ದಾರೆ.
“ಒಂದು ವೇಳೆ ಬಿಜೆಪಿ ಅಭ್ಯರ್ಥಿ ಕೇವಲ 250 ಮತಗಳನ್ನು ಗಳಿಸಿದರೆ, ಅದರಿಂದ ಎಷ್ಟು ಅವಮಾನವಾಗಲಿದೆ? ಹೀಗಾಗಿಯೇ ಅವರು ಬರ್ಹೈತ್ ವಿಧಾನಸಭಾ ಕ್ಷೇತ್ರದಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ನನಗನ್ನಿಸುತ್ತಿದೆ ಅಥವಾ ಹಣದ ದುರಾಸೆಯಿಂದ ಯಾರಾದರೂ ಅವರ ವಿರುದ್ಧ ಸ್ಪರ್ಧಿಸಲು ಮುಂದಾಗುವ ಸಾಧ್ಯತೆ ಇದೆ” ಎಂದೂ ಅವರು ಹೇಳಿದ್ದಾರೆ.
ಸಂತಾಲ್ ಪರಗಣ ಪ್ರಾಂತ್ಯದಲ್ಲಿರುವ ಬರ್ಹೈತ್ ವಿಧಾನಸಭಾ ಕ್ಷೇತ್ರವನ್ನು ಜೆಎಂಎಂನ ಭದ್ರಕೋಟೆ ಎಂದೇ ಪರಿಗಣಿಸಲಾಗಿದೆ. 2019ರಲ್ಲಿ ಸಂತಾಲ್ ಪ್ರಾಂತ್ಯದ ಬರ್ಹೈತ್ ಹಾಗೂ ಡುಮ್ಕಾ ವಿಧಾನಸಭಾ ಕ್ಷೇತ್ರಗಳೆರಡರಿಂದಲೂ ಸ್ಪರ್ಧಿಸಿದ್ದ ಹೇಮಂತ್ ಸೊರೇನ್, ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದರು.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಎರಡು ಹಂತದಲ್ಲಿ ನವೆಂಬರ್ 13 ಹಾಗೂ ನವೆಂಬರ್ 20ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.