‌ಬಿಜೆಪಿ ಟಿಕೆಟ್ ನಿರಾಕರಣೆ: ಕಾಂಗ್ರೆಸ್‌ ಸೇರಲು ವರುಣ್‌ ಗಾಂಧಿಗೆ ಆಹ್ವಾನ

Update: 2024-03-26 11:21 GMT

 ವರುಣ್‌ ಗಾಂಧಿ | Photo: PTI 

ಹೊಸದಿಲ್ಲಿ: ಉತ್ತರ ಪ್ರದೇಶದ ಪಿಲಿಭಿಟ್‌ ಕ್ಷೇತ್ರದ ಹಾಲಿ ಸಂಸದ ವರುಣ್‌ ಗಾಂಧಿ ಅವರನ್ನು ಕೈಬಿಟ್ಟು 2021 ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಜಿತಿನ್‌ ಪ್ರಸಾದ್ ಅವರಿಗೆ ಬಿಜೆಪಿ ಟಿಕೆಟ್‌ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧುರಿ, ವರುಣ್‌ ಗಾಂಧಿ ಅವರಿಗೆ ಕಾಂಗ್ರೆಸ್‌ ಸೇರಲು ಸ್ವಾಗತವಿದೆ ಎಂದರು.

ವರುಣ್‌ ಗಾಂಧಿ ಅವರ ಮೂಲ ಗಾಂಧಿ ಕುಟುಂಬವಾಗಿರುವುದರಿಂದ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ ಎಂದೂ ಚೌಧುರಿ ಹೇಳಿಕೊಂಡರು.

“ಅವರು ಕಾಂಗ್ರೆಸ್‌ ಸೇರಬೇಕು.‌ ಅವರು ಸೇರಿದರೆ ನಮಗೆ ಖುಷಿಯಿದೆ. ಅವರು ದೊಡ್ಡ ನಾಯಕ, ಉತ್ತಮ ಶಿಕ್ಷಣ ಪಡೆದ ರಾಜಕಾರಣಿಯಾಗಿದ್ಧಾರೆ. ಅವರು ಪಾರದರ್ಶಕರಾಗಿದ್ದಾರೆ ಹಾಗೂ ಗಾಂಧಿ ಕುಟುಂಬದ ಜೊತೆ ಸಂಬಂಧ ಹೊಂದಿದ್ದಾರೆ. ಅದಕ್ಕೆ ಅವರಿಗೆ ಬಿಜೆಪಿ ಟಿಕೆಟ್‌ ನೀಡಿಲ್ಲ. ವರುಣ್‌ ಗಾಂಧಿ ಈಗ ಕಾಂಗ್ರೆಸ್‌ ಪಕ್ಷಕ್ಕೆ ಸೇರಬೇಕೆಂದು ನಾವು ಬಯಸುತ್ತೇವೆ,” ಎಂದು ಹೇಳಿದರು.‌

ತಮಗೆ ಪಿಲಿಭಿಟ್‌ ಕ್ಷೇತ್ರದಿಂದ ಟಿಕೆಟ್‌ ನಿರಾಕರಿಸಿ ಮಾಜಿ ಕಾಂಗ್ರೆಸ್‌ ನಾಯಕ ಜಿತಿನ್‌ ಪ್ರಸಾದಗೆ ಟಿಕೆಟ್‌ ನೀಡಿರುವುದು ತಮಗೆ ಪಕ್ಷ ಮಾಡಿದ ವಂಚನೆ ಎಂಬ ಭಾವನೆಯಿದೆ ಎಂದು ವರುಣ್‌ ಗಾಂಧಿ ತಮ್ಮ ಸಮೀಪವರ್ತಿಗಳಲ್ಲಿ ಹೇಳಿಕೊಂಡಿದ್ಧಾರೆನ್ನಲಾಗಿದೆ.

ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದೆಂದು ಹೇಳಲಾಗಿದೆಯಾದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲೂಬಹುದು ಎನ್ನಲಾಗಿದೆ.

ವರುಣ್‌ ಗಾಂಧಿ ಇತ್ತೀಚೆಗೆ ನಾಮಪತ್ರಗಳ ನಾಲ್ಕು ಸೆಟ್‌ ಖರೀದಿಸಿದ್ದರು ಹಾಗೂ ಪ್ರಚಾರಕ್ಕಾಗಿ ಎರಡು ವಾಹನಗಳು ಹಾಗೂ 10 ಮೋಟಾರ್‌ ಸೈಕಲ್‌ಗಳನ್ನು ಸಿದ್ಧಪಡಿಸುವಂತೆಯೂ ಕಾರ್ಯಕರ್ತರಲ್ಲಿ ಹೇಳಿದ್ದರೆನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News