ಈಡಿ ನೋಟಿಸ್ ಗೆ ಅವಿಧೇಯತೆ ; ಹೇಮಂತ್ ಸೊರೇನ್ ಗೆ ನ್ಯಾಯಾಲಯದ ಸಮನ್ಸ್
ರಾಂಚಿ : ಭೂ ಅತಿಕ್ರಮಣ ಆರೋಪದ ಪ್ರಕರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ ನೀಡಿದ ನೋಟಿಸ್ ಗೆ ಅವಿಧೇಯತೆ ತೋರಿದ ಆರೋಪದಲ್ಲಿ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಇಲ್ಲಿನ ನ್ಯಾಯಾಲಯ ಸೋಮವಾರ ಸಮನ್ಸ್ ಜಾರಿ ಮಾಡಿದೆ.
ಜೆಎಂಎಂನ ಹಿರಿಯ ನಾಯಕ ಹೇಮಂತ್ ಸೊರೇನ್ ಅವರ ವಿರುದ್ಧ ಜಾರಿಗೊಳಿಸಲಾದ 7 ಸಮನ್ಸ್ ಗಳಿಗೆ ಅವರು ಹಾಜರಾಗಿಲ್ಲ ಎಂದು ಆರೋಪಿಸಿ ಕೆಲವು ಸಮಯದ ಹಿಂದೆ ಜಾರಿ ನಿರ್ದೇಶನಾಲಯ ದೂರು ನೀಡಿತ್ತು. ಮೊದಲ ಸಮನ್ಸ್ ಅನ್ನು ಕಳೆದ ವರ್ಷ ಆಗಸ್ಟ್ 14ರಂದು ನೀಡಲಾಗಿತ್ತು ಎಂದು ಅದು ದೂರಿನಲ್ಲಿ ಹೇಳಿತ್ತು.
ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 174 (ಸರಕಾರಿ ಅಧಿಕಾರಿಗಳ ಆದೇಶಕ್ಕೆ ವಿಧೇಯರಾಗಿ ಹಾಜರಾಗದಿರುವುದು) ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ಜಾರಿ ನಿರ್ದೇಶನಾಲಯ ತನ್ನ ದೂರಿನಲ್ಲಿ ಹೇಳಿತ್ತು.
ಹೇಮಂತ್ ಸೊರೇನ್ ಹಾಜರಾಗಲು ಸಮನ್ಸ್ ನೀಡಲು ಕಚೇರಿಗೆ ನಿರ್ದೇಶಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ ಹಾಗೂ ಅವರು ತನ್ನ ಮುಂದೆ ಎಪ್ರಿಲ್ 3ರಂದು ಹಾಜರಾಗುವಂತೆ ದಿನ ನಿಗದಿಪಡಿಸಿದೆ.
ಹೇಮಂತ್ ಸೊರೇನ್ ಅವರನ್ನು ರಾಂಚಿಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಎರಡನೇ ಸುತ್ತಿನ ವಿಚಾರಣೆಯ ಬಳಿಕ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಜನವರಿ 31ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.