ನಮ್ಮ ರಾಜ್ಯದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸಬೇಡಿ: ನೆರೆಯ ರಾಜ್ಯಗಳಿಗೆ ಮಣಿಪುರ ಸಿಎಂ ಎಚ್ಚರಿಕೆ

Update: 2023-07-27 14:57 GMT

 ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್

ಇಂಫಾಲ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ವಿಷಯವನ್ನು ಯೂರೋಪಿಯನ್ ಸಂಸತ್ತು ಕೈಗೆತ್ತಿಕೊಂಡಿರುವುದನ್ನು ಬುಧವಾರ ಟೀಕಿಸಿರುವ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, "ನಮ್ಮ ರಾಜ್ಯದ ಆಂತರಿಕ ವಿಷಯಗಳಲ್ಲಿ ನಿಮ್ಮ ಮೂಗು ತೂರಿಸಬೇಡಿ" ಎಂದು ನೆರೆಯ ಈಶಾನ್ಯ ರಾಜ್ಯಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ರಾಜ್ಯದ ಭೂಭಾಗವನ್ನು ಕಬಳಿಸಲು ಯತ್ನಿಸುತ್ತಿರುವ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

"ಈ ಹಿಂಸಾಚಾರಕ್ಕೆ ಮೂಲ ಕಾರಣ ಮಾದಕ ದ್ರವ್ಯ ಕಳ್ಳ ಸಾಗಣೆ, ಕಾನೂನುಬಾಹಿರ ಗಸಗಸೆ ಕೃಷಿ, ರಾಜ್ಯದ ಒಗ್ಗಟ್ಟನ್ನು ಮುರಿಯಲು ಅಧಿಕಾರ ಕಬಳಿಸಲು ಯತ್ನಿಸುತ್ತಿರುವಂತಹ ವಿಚ್ಛಿದ್ರಕಾರಿ ಶಕ್ತಿಗಳಾಗಿವೆ. ಕುಕಿ ಸಹೋದರರು ಹಾಗೂ ಸಹೋದರಿಯರ ವಿರುದ್ಧ ರಾಜ್ಯ ಸರ್ಕಾರಕ್ಕೆ ಯಾವುದೇ ಸೇಡಿಲ್ಲ" ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಮಿಜೋರಾಂ ಮುಖ್ಯಮಂತ್ರಿ ಝೊರಾಂತಂಗ ಅವರನ್ನು ಪ್ರಸ್ತಾಪಿಸಿದ ಬೀರೇನ್ ಸಿಂಗ್, ದೀರ್ಘಕಾಲದ ಹೋರಾಟದ ನಂತರ ಅಸ್ಸಾಂನಿಂದ ಬೇರ್ಪಟ್ಟು ಮಿಜೋರಾಂ ಪ್ರತ್ಯೇಕ ರಾಜ್ಯವಾಗಿದೆ. ಆದರೆ, "ಮಣಿಪುರ 2,000 ವರ್ಷಗಳಿಂದ ಒಂದು ದೇಶವಾಗಿದೆ. ನಾವು ಬರ್ಮಾ ಹಾಗೂ ಚೀನಾದಿಂದ ಹಲವಾರು ಶತ್ರುಗಳನ್ನು ಎದುರಿಸಿದ್ದೇವೆ ಮತ್ತು ಪ್ರಬಲವಾಗಿ ಉಳಿದಿದ್ದೇವೆ. ಇದನ್ನು ನಾವೂ ಮರೆಯಬಾರದು ಹಾಗೂ ಝೊರಾಂತಂಗ ಕೂಡಾ ಮರೆಯಕೂಡದು. ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಪಾದಯಾತ್ರೆಯಲ್ಲಿ ಭಾಗವಹಿಸಿರಬಹುದು" ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ, ಮಂಗಳವಾರ ಮಣಿಪುರ ಹಿಂಸಾಚಾರದಲ್ಲಿ ಸಂತ್ರಸ್ತರಾಗಿರುವ ಕುಕಿ ಬುಡಕಟ್ಟು ಸಮುಯದಾಯದ ಪರವಾಗಿ ತಮ್ಮ ಬೆಂಬಲ ಸೂಚಿಸಿ, ಮಿಜೋರಾಂನ ಸರ್ಕಾರೇತರ ಸಂಸ್ಥೆ ಸಮನ್ವಯ ಸಮಿತಿ ಆಯೋಜಿಸಿದ್ದ ಐಕ್ಯತಾ ಪಾದಯಾತ್ರೆಯಲ್ಲಿ ತಮ್ಮ ಸಂಪುಟದ ಸಚಿವರು ಹಾಗೂ ಮಿಝೊ ರಾಷ್ಟ್ರೀಯ ರಂಗದ ಶಾಸಕರೊಂದಿಗೆ ಝೊರಾಂತಂಗ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News