ದುಲೀಪ್ ಟ್ರೋಫಿ | ಭಾರತ ಎ ತಂಡಕ್ಕೆ 186 ರನ್ ಜಯ

Update: 2024-09-15 16:05 GMT

ಅನಂತಪುರ (ಆಂಧ್ರಪ್ರದೇಶ) : ದುಲೀಪ್ ಟ್ರೋಫಿ ಪಂದ್ಯದಲ್ಲಿ ರವಿವಾರ ಭಾರತ ಎ ತಂಡವು ಭಾರತ ಡಿ ತಂಡವನ್ನು 186 ರನ್‌ಗಳಿಂದ ಸೋಲಿಸಿದೆ.

ಅನಂತಪುರದ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನವಾದ ರವಿವಾರ ಭಾರತ ಡಿ ತಂಡದ ರಿಕಿ ಭುಯಿ ವೀರೋಚಿತ ಪ್ರದರ್ಶನ ನೀಡಿ ಶತಕ ಬಾರಿಸಿದರು. ಆ ಮೂಲಕ ಸೋಲನ್ನು ಸ್ವಲ್ಪ ಕಾಲ ಮುಂದೂಡಿದರಾದರೂ, ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಅವರು 195 ಎಸೆತಗಳಿಮದ 113 ರನ್‌ಗಳನ್ನು ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 14 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳಿದ್ದವು.

ಆದರೆ, ಭಾರತ ಎ ತಂಡದ ಸ್ಪಿನ್ನರ್‌ಗಳಾದ ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ಎದುರಾಳಿ ಬ್ಯಾಟರ್‌ಗಳನ್ನು ಮಣಿಸಿದರು.

ಮುನ್ನಾ ದಿನ 44 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದ ಭುಯಿ, ರವಿವಾರ ಭವ್ಯ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ತನ್ನ ಇನಿಂಗ್ಸನ್ನು ಶತಕದವರೆಗೆ ವಿಸ್ತರಿಸಿದರು.

ಗೆಲ್ಲಲು ದ್ವಿತೀಯ ಇನಿಂಗ್ಸ್‌ನಲ್ಲಿ 488 ರನ್‌ಗಳ ಬೃಹತ್ ಗುರಿಯನ್ನು ಪಡೆದ ಇಂಡಿಯಾ ಡಿ ರವಿವಾರ ತನ್ನ ಇನಿಂಗ್ಸನ್ನು ಮುನ್ನಾ ದಿನದ ಮೊತ್ತವಾದ ಒಂದು ವಿಕೆಟ್ ನಷ್ಟಕ್ಕೆ 62 ರನ್ ಇದ್ದಲ್ಲಿಂದ ಮುಂದುವರಿಸಿತು. ಅಂತಿಮವಾಗಿ ಅದು 301 ರನ್‌ಗಳಿಗೆ ತನ್ನ ಇನಿಂಗ್ಸ್ ಮುಕ್ತಾಯಗೊಳಿಸಿತು.

ಭುಯಿ ಅವರನ್ನು ಹೊರತುಪಡಿಸಿ ಇತರ ಆಟಗಾರರು ಯಾವುದೇ ಪ್ರತಿರೋಧ ಒಡ್ಡಲಿಲ್ಲ. ಭುಯಿ ಮತ್ತು ಯಶ್ ದುಬೆ (37) ಎರಡನೇ ವಿಕೆಟ್‌ಗೆ 100 ರನ್‌ಗಳನ್ನು ಸೇರಿಸಿದರು.

ಬಳಿಕ ಭುಯಿ ನಾಯಕ ಶ್ರೇಯಸ್ ಅಯ್ಯರ್ (41)ಜೊತೆಗೆ 53 ರನ್‌ಗಳು ಮತ್ತು ಸಂಜು ಸ್ಯಾಮ್ಸನ್ (40) ಜೊತೆಗೆ 62 ರನ್‌ಗಳ ಜೊತೆಯಾಟವನ್ನು ನಿಭಾಯಿಸಿದರು.

ಶಮ್ಸ್ ಮುಲಾನಿ 117 ರನ್‌ಗಳನ್ನು ನೀಡಿ 3 ವಿಕೆಟ್‌ಗಳನ್ನು ಉರುಳಿಸಿದರೆ, ತನುಷ್ ಕೋಟ್ಯಾನ್ 73 ರನ್‌ಗಳನ್ನು ಕೊಟ್ಟು 4 ವಿಕೆಟ್‌ಗಳನ್ನು ಪಡೆದರು.

ಶಮ್ಸ್ ಮುಲಾನಿಯನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.

ಈ ವಿಜಯದೊಂದಿಗೆ ಇಂಡಿಯಾ ಎ ತಂಡಕ್ಕೆ 6 ಅಂಕಗಳು ಲಭಿಸಿವೆ ಮತ್ತು ಅದು ಪ್ರಶಸ್ತಿ ಸ್ಪರ್ಧೆಯಲ್ಲಿದೆ. ಆದರೆ, ಅದು 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಇಂಡಿಯಾ ಸಿ ತಂಡವನ್ನು ಮುಂದಿನ ಪಂದ್ಯದಲ್ಲಿ ಸೋಲಿಸಬೇಕಾಗಿದೆ. ಮುಂದಿನ ಪಂದ್ಯವು ಸೆಪ್ಟಂಬರ್ 19ರಂದು ಆರಂಭಗೊಳ್ಳಲಿದೆ.

ಸತತ ಎರಡು ಸೋಲುಗಳೊಂದಿಗೆ ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದಿರುವ ಇಂಡಿಯಾ ಡಿ ತಂಡವು, 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಇಂಡಿಯಾ ಬಿ ತಂಡವನ್ನು ಸೆಪ್ಟಂಬರ್ 19ರಂದು ಆರಂಭಗೊಳ್ಳಲಿರುವ ತನ್ನ ಮುಂದಿನ ಪಂದ್ಯದಲ್ಲಿ ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News