ಎಪಿಕ್ ಕಾರ್ಡ್ ಸಂಖ್ಯೆಗಳ ಪುನರಾವರ್ತನೆ ನಕಲಿ ಮತದಾರರನ್ನು ಸೂಚಿಸುವುದಿಲ್ಲ: ಚುನಾವಣಾ ಆಯೋಗ

ಚುನಾವಣಾ ಆಯೋಗ | PC : PTI
ಹೊಸದಿಲ್ಲಿ: ಎರಡು ವಿಭಿನ್ನ ರಾಜ್ಯಗಳಲ್ಲಿ ಒಂದೇ ರೀತಿಯ ಸಂಖ್ಯೆಗಳ ಮತದಾರರ ಭಾವಚಿತ್ರ ಸಹಿತ ಗುರುತಿನ ಚೀಟಿ(ಎಪಿಕ್)ಗಳನ್ನು ವಿತರಿಸಲಾಗಿದೆಯೆಂಬ ವರದಿಗಳ ಹಿನ್ನೆಲೆಯಲ್ಲಿ ರವಿವಾರ ಚುನಾವಣಾ ಆಯೋಗವು,ಪುನರಾವರ್ತಿತ ಸಂಖ್ಯೆಗಳು ನಕಲಿ ಮತದಾರರನ್ನು ಸೂಚಿಸುವುದಿಲ್ಲ ಎಂದು ಹೇಳಿದೆ.
ಕೆಲವು ಮತದಾರರ ಎಪಿಕ್ ಸಂಖ್ಯೆಗಳು ಒಂದೇ ಆಗಿರಬಹುದು, ಆದರೆ ಜನಸಂಖ್ಯಾ ವಿವರಗಳು,ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆ ಸೇರಿದಂತೆ ಇತರ ವಿವರಗಳು ಭಿನ್ನವಾಗಿವೆ ಎಂದು ಅದು ತಿಳಿಸಿದೆ.
ಎಪಿಕ್ ಸಂಖ್ಯೆ ಏನೇ ಆಗಿರಲಿ,ಯಾವುದೇ ಮತದಾರನು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿರುವ ತನ್ನ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ನಿಗದಿತ ಮತಗಟ್ಟೆಯಲ್ಲಿ ಮಾತ್ರ ಮತವನ್ನು ಚಲಾಯಿಸಬಹುದು ಎಂದು ಹೇಳಿರುವ ಆಯೋಗವು,ಎಲ್ಲ ರಾಜ್ಯಗಳ ಮತದಾರರ ಪಟ್ಟಿಗಳ ದತ್ತಾಂಶ ಕೋಶವನ್ನು ವರ್ಗಾಯಿಸುವ ಮುನ್ನ ಅನುಸರಿಸಲಾಗುತ್ತಿದ್ದ ‘ವಿಕೇಂದ್ರಿಕೃತ ಮತ್ತು ದೈಹಿಕ ಕಾರ್ಯವಿಧಾನ’ದಿಂದಾಗಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೆಲವು ಮತದಾರರಿಗೆ ಒಂದೇ ರೀತಿಯ ಎಪಿಕ್ ಸಂಖ್ಯೆಗಳನ್ನು ಅಥವಾ ಸರಣಿಗಳನ್ನು ನೀಡಲಾಗಿತ್ತು ಎಂದು ವಿವರಿಸಿದೆ.
ಇದರ ಪರಿಣಾಮವಾಗಿ ಕೆಲವು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಒಂದೇ ರೀತಿಯ ಎಪಿಕ್ ಆಲ್ಫಾನ್ಯೂಮರಿಕ್ ಸರಣಿಗಳನ್ನು ಬಳಸಿದ್ದರು ಮತ್ತು ಇದು ವಿವಿಧ ರಾಜ್ಯಗಳ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಎಪಿಕ್ ಸಂಖ್ಯೆಗಳ ಪುನರಾವರ್ತನೆಗೆ ಅವಕಾಶ ನೀಡಿರುವ ಸಾಧ್ಯತೆಯಿದೆ ಎಂದು ಆಯೋಗವು ತಿಳಿಸಿದೆ.
ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಚುನಾವಣಾಧಿಕಾರಿಗಳಿಗೆ ನಕಲಿ ನಮೂದುಗಳನ್ನು ತೆಗೆದುಹಾಕುವ ಮತ್ತು ವಲಸಿಗರನ್ನು ಸೇರಿಸುವ ಮೂಲಕ ಚುನಾವಣೆ ವ್ಯವಸ್ಥೆಯನ್ನು ನಿರ್ವಹಿಸಲು ಚುನಾವಣಾ ಅಧಿಕಾರಿಗಳಿಗೆ ನೆರವಾಗುತ್ತದೆ.
ಯಾವುದೇ ಆತಂಕಗಳನ್ನು ನಿವಾರಿಸಲು ನೋಂದಾಯಿತ ಮತದಾರರಿಗೆ ವಿಶಿಷ್ಟ ಎಪಿಕ್ ಸಂಖ್ಯೆಯ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಎಪಿಕ್ ಸಂಖ್ಯೆ ಪುನರಾವರ್ತನೆಗೊಂಡ ಯಾವುದೇ ಪ್ರಕರಣದಲ್ಲಿ ವಿಶಿಷ್ಟ ಎಪಿಕ್ ಸಂಖ್ಯೆಯನ್ನು ನೀಡುವ ಮೂಲಕ ಅದನ್ನು ಸರಿಪಡಿಸಲಾಗುವುದು ಎಂದು ಚುನಾವಣಾ ಆಯೋಗವು ತಿಳಿಸಿದೆ.