ಕರ್ನಾಟಕದಲ್ಲಿ ಸರಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ ಟೀಕೆ; ರಾಹುಲ್ ಗಾಂಧಿಯವರ ವಿಯೆಟ್ನಾಂ ಭೇಟಿಗಳನ್ನು ಪ್ರಶ್ನಿಸಿದ ಬಿಜೆಪಿ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಸರಕಾರಿ ಕಾಮಗಾರಿಗಳ ಗುತ್ತಿಗೆಗಳಲ್ಲಿ ಶೇ.4ರಷ್ಟನ್ನು ಮುಸ್ಲಿಮರಿಗೆ ಮೀಸಲಿರಿಸುವ ಕರ್ನಾಟಕ ಸರಕಾರದ ನಿರ್ಧಾರವು ಅಸಾಂವಿಧಾನಿಕವಾಗಿದೆ ಎಂದು ಟೀಕಿಸಿರುವ ಬಿಜೆಪಿ,ಇದು ಕಾಂಗ್ರೆಸಿನ ತುಷ್ಟೀಕರಣ ರಾಜಕೀಯದ ಭಾಗವಾಗಿದೆ ಮತ್ತು ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಆರೋಪಿಸಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಅವರು, ವಿಯೆಟ್ನಾಂ ಬಗ್ಗೆ ತನ್ನ ‘ಅತಿಯಾದ ಪ್ರೀತಿ’ಯ ಬಗ್ಗೆ ವಿವರಿಸುವಂತೆ ಕಾಂಗ್ರಸ್ ನಾಯಕ ರಾಹುಲ್ ಗಾಂಧಿಯವರನ್ನು ಆಗ್ರಹಿಸಿದರು. ಲೋಕಸಭೆಯ ವಿಪಕ್ಷ ನಾಯಕರು ತನ್ನ ಕ್ಷೇತ್ರಕ್ಕಿಂತ ಆ ದೇಶದಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎಂದು ಅವರು ಪ್ರತಿಪಾದಿಸಿದರು.
ಹೊಸ ವರ್ಷದ ಸ್ವಾಗತಕ್ಕಾಗಿ ವಿಯೆಟ್ನಾಮ್ ನಲ್ಲಿದ್ದ ರಾಹುಲ್ ಈಗ ಹೋಳಿ ಸಂದರ್ಭದಲ್ಲಿ ಆ ದೇಶದಲ್ಲಿದ್ದಾರೆ ಎಂದು ಹೇಳಲಾಗಿದೆ ಎಂದ ಪ್ರಸಾದ್,ಆ ದೇಶಕ್ಕೆ ಅವರ ಪದೇ ಪದೇ ಭೇಟಿಗಳು ತುಂಬ ಕುತೂಹಲಕಾರಿಯಾಗಿವೆ ಎಂದು ಹೇಳಿದರು.
ಪ್ರತಿಪಕ್ಷಗಳಲ್ಲಿ ಸ್ಪರ್ಧಾತ್ಮಕ ಕೋಮುವಾದಿ ಮತ್ತು ವೋಟ್ ಬ್ಯಾಂಕ್ ರಾಜಕೀಯದಲ್ಲಿ ಕಾಂಗ್ರೆಸ್‌ನ್ನು ಅಗ್ರಸ್ಥಾನದಲ್ಲಿರಿಸಲು ರಾಹುಲ್ ಬಯಸಿದ್ದಾರೆ ಎಂದು ಹೇಳಿದ ಅವರು, ಮುಸ್ಲಿಮ್ ಗುತ್ತಿಗೆದಾರರಿಗೆ ಮೀಸಲಾತಿಯನ್ನು ಒದಗಿಸುವ ಕರ್ನಾಟಕ ಸರಕಾರದ ನಿರ್ಧಾರದ ಹಿಂದೆ ರಾಹುಲ್ ಕೈವಾಡವಿದೆ ಎಂದು ಆರೋಪಿಸಿದರು.
ಇಂತಹ ನಿರ್ಧಾರ ಸಣ್ಣದಾಗಿ ಕಾಣಿಸಬಹುದು,ಆದರೆ ಇಂತಹ ಬೆಳವಣಿಗೆಗಳು ಗಂಭೀರ ರಾಷ್ಟ್ರೀಯ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಿದ ಪ್ರಸಾದ್, ಇಂತಹ ಸ್ಪರ್ಧಾತ್ಮಕ ತುಷ್ಟೀಕರಣ ರಾಜಕೀಯಕ್ಕೆ ಏನಾದರೂ ಮಿತಿಯಿದೆಯೇ? ಮುಂಬರುವ ದಿನಗಳಲ್ಲಿ ಸಿನೆಮಾ ಮತ್ತು ರೈಲು ಟಿಕೆಟ್‌ಗಳ ಖರೀದಿಗಾಗಿ ಮುಸ್ಲಿಮರಿಗೆ ಪ್ರತ್ಯೇಕ ಸರದಿ ಸಾಲುಗಳು ಕಂಡು ಬಂದರೆ ಅಚ್ಚರಿಯೇನಿಲ್ಲ ಎಂದರು.
ಇಂತಹ ನಿರ್ಧಾರಗಳು ಇಂತಹ ರಾಜಕೀಯಕ್ಕೆ ವಿರುದ್ಧವಾಗಿರುವ ಮತ್ತು ದೇಶದ ಅಭಿವೃದ್ಧಿಗೆ ಮಹತ್ವ ನೀಡುವ ಮುಸ್ಲಿಮರ ಧ್ವನಿಯನ್ನೂ ದುರ್ಬಲಗೊಳಿಸುತ್ತವೆ ಎಂದೂ ಅವರು ಹೇಳಿದರು.