ತಮಿಳು ಸಿಹಿಯಾದ ಭಾಷೆ; ಉತ್ತರ ಭಾರತದಲ್ಲಿ ಅದು ಮಸಾಲೆ ದೋಸೆ ಎಂದು ಹೆಸರಾಗಿದೆ: ಅಶ್ವಿನಿ ವೈಷ್ಣವ್

ಅಶ್ವಿನಿ ವೈಷ್ಣವ್ | PTI
ಚೆನ್ನೈ: ತಮಿಳು ಸಿಹಿಯಾದ ಭಾಷೆ ಎಂದು ಶನಿವಾರ ಶ್ಲಾ ಘಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಅದು ದೇಶ ಹಾಗೂ ಜಗತ್ತಿನ ಪಾಲಿಗೆ ಒಂದು ಆಸ್ತಿಯಾಗಿದೆ ಎಂದು ಕೊಂಡಾಡಿದರು.
ಶ್ರೀಪೆರಂಬದೂರಿನಲ್ಲಿ ಆಯೋಜನೆಗೊಂಡಿದ್ದ ಝೆಟ್ ವರ್ಕ್ ಇಲೆಕ್ಟ್ರಾನಿಕ್ಸ್ ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, “ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಎಲ್ಲ ಭಾರತೀಯ ಭಾಷೆಗಳು ಸೂಕ್ತ ಗೌರವ ಪಡೆಯುವುದನ್ನು ಖಾತರಿ ಪಡಿಸಿದ್ದಾರೆ” ಎಂದು ಹೇಳಿದರು.
ನಾನು ಐಐಟಿ ಕಾನ್ಪುರ್ ನಲ್ಲಿ ವ್ಯಾಸಂಗ ಮಾಡುವಾಗ ತಮಿಳು ಭಾಷೆಯ ಕುರಿತು ಬೋಧಿಸಿದ ಸಡಗೋಪನ್ ಎಂಬ ಪ್ರಾಧ್ಯಾಪಕರು ದೊರೆತದ್ದು ನನ್ನ ಪಾಲಿನ ಅದೃಷ್ಟ ಎಂದೂ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಅಶ್ವಿನಿ ವೈಷ್ಣವ್ ಸ್ಮರಿಸಿದರು.
ತಮ್ಮ ಭಾಷಣ ಪ್ರಾರಂಭಿಸುವುದಕ್ಕೂ ಮುನ್ನ ತಮಿಳಿನಲ್ಲಿ ‘ವಣಕ್ಕಂ’ (ನಮಸ್ತೆ) ಎಂದು ಸಭಿಕರನ್ನುದ್ದೇಶಿಸಿ ಮಾತು ಪ್ರಾರಂಭಿಸಿದ ಅಶ್ವಿನಿ ವೈಷ್ಣವ್, “ತಮಿಳು ತುಂಬಾ ತುಂಬಾ ಸಿಹಿಯಾದ ಭಾಷೆಯಾಗಿದೆ. ನನಗೆ ತಿಳಿದಿರುವ ಮೂರೇ ಮೂರು ತಮಿಳು ಪದಗಳು – ವಣಕ್ಕಂ (ನಮಸ್ತೆ), ಎಪ್ಪಡಿ ಇರುಕೀಂಗ (ಹೇಗಿದ್ದೀರಿ) ಹಾಗೂ ನಂದ್ರಿ (ಧನ್ಯವಾದ) ಆಗಿವೆ” ಎಂದು ಹೇಳಿದರು.
ಐಐಟಿ ಕಾನ್ಪುರ್ ನಲ್ಲಿದ್ದಾಗ ತಮ್ಮ ಹಾಗೂ ಸಡಗೋಪನ್ ರೊಂದಿಗಿನ ಸಂಬಂಧವನ್ನು ಉಲ್ಲೇಖಿಸಿದ ಅವರು, “ಸಡಗೋಪನ್ ನನಗೆ ತಮಿಳು ಭಾಷೆಯನ್ನು ಪರಿಚಯಿಸಿದರು ಹಾಗೂ ಉತ್ತರ ಭಾರತದಲ್ಲಿ ತಮಿಳು ಭಾಷೆ ಮಸಾಲೆ ದೋಸೆ ಎಂದು ಹೆಸರಾಗಿದೆ. ಅವರು ನನಗೆ ತಮಿಳು ಸಂಸ್ಕೃತಿಯ ವಿವಿಧ ಆಯಾಮಗಳನ್ನು ಬೋಧಿಸಿದರು. ತಮಿಳು ತುಂಬಾ ತುಂಬಾ ಆಳವಾದ ಹಾಗೂ ಪುರಾತನ ಸಂಸ್ಕೃತಿಯಾಗಿದೆ. ನಾವೆಲ್ಲರೂ ತಮಿಳು ಸಂಸ್ಕೃತಿ ಮತ್ತು ತಮಿಳು ಭಾಷೆಯನ್ನು ಗೌರವಿಸುತ್ತೇವೆ” ಎಂದು ಹೇಳಿದರು.
ಕೇಂದ್ರ ಸರಕಾರ ಹಾಗೂ ತಮಿಳುನಾಡಿನ ಡಿಎಂಕೆ ಸರಕಾರದ ನಡುವೆ ತ್ರಿಭಾಷಾ ಸೂತ್ರ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಇಂದಿನ ಹೇಳಿಕೆ ಮಹತ್ವ ಪಡೆದುಕೊಂಡಿದೆ.