ಪಶ್ಚಿಮ ಬಂಗಾಳ: ಬೀರ್‌ಭೂಮ್‌ನಲ್ಲಿ ಹೋಳಿ ಘರ್ಷಣೆಗಳ ಬಳಿಕ ಇಂಟರ್ನೆಟ್ ಸೇವೆಗಳು ಸ್ಥಗಿತ
Update: 2025-03-15 21:41 IST

ಸಾಂದರ್ಭಿಕ ಚಿತ್ರ | PC : freepik.com
ಕೋಲ್ಕತಾ: ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯಲ್ಲಿ ಶುಕ್ರವಾರ ಹೋಳಿ ಆಚರಣೆಗಳ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆಗಳು ಭುಗಿಲೆದ್ದ ಬಳಿಕ ಜಿಲ್ಲೆಯ ಐದು ಗ್ರಾಮ ಪಂಚಾಯತ್ ಮತ್ತು ಸೈಥಿಯಾ ನಗರಸಭಾ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಮಾ.17ರವರೆಗೆ ಸ್ಥಗಿತಗೊಳಿಸಲಾಗಿದೆ.
ಸೈಂಥಿಯಾ ಪಟ್ಟಣದಲ್ಲಿ ಹೋಳಿ ಸಂಭ್ರಮದಲ್ಲಿದ್ದ ಗುಂಪು ಮತ್ತು ಕೆಲವು ಪಾನಮತ್ತ ವ್ಯಕ್ತಿಗಳ ನಡುವಿನ ವಾಗ್ವಾದ ಉಲ್ಬಣಗೊಂಡು ಘರ್ಷಣೆಗೆ ತಿರುಗಿತ್ತು. ಉಭಯ ಗುಂಪುಗಳು ಪರಸ್ಪರರತ್ತ ಕಲ್ಲು ತೂರಾಟ ನಡೆಸಿದ್ದರು ಮತ್ತು ಹೊಡೆದಾಟದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಕೆಲವು ಸ್ಥಳೀಯರೂ ಗಾಯಗೊಂಡಿದ್ದಾರೆ. ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಘಟನೆಗೆ ಸಂಬಂಧಿಸಿದಂತೆ 20ಕ್ಕೂ ಅಧಿಕ ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಪರಿಚಿತ ಪೋಲಿಸ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.